ರಣಜಿ ಫೈನಲ್‌ನಲ್ಲಿ ಆರ್ಸಿಬಿ ಆಟಗಾರ ರಜತ್‌ ಪಟೀದಾರ್‌ ಅಮೋಘ ಶತಕ; ಚೊಚ್ಚಲ ಟ್ರೋಫಿ ಕನಸಲ್ಲಿ ಮಧ್ಯಪ್ರದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಬೆಂಗಳೂರು:
ಸಿಕ್ಕ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡ ಆರ್ಸಿಬಿ ಆಟಗಾರ ರಜತ್‌ ಪಾಟೀದಾರ್‌ ಮನಮೋಹಕ ಶತಕದ ಬಲದಿಂದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಫೈನಲ್‌ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು ಮುಂಬೈ ವಿರುದ್ಧ ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದ್ದು ಚೊಚ್ಚಲ ಟ್ರೋಫಿ ಗೆಲ್ಲುವತ್ತ ಮುನ್ನುಗ್ಗುತ್ತಿದೆ.
ಮುಂಬೈ ತನ್ನ ಮೊದಲ ಇನ್ನಿಂಗ್ಸ್‌ ಮೊತ್ತ 374 ರನ್ ಗಳನ್ನು ಬೆನ್ನಟ್ಟಿದ ಮಧ್ಯಪ್ರದೇಶ ಪರ ಅಗ್ರಕ್ರಮಾಂಕದ ಬ್ಯಾಟರ್‌ ಗಳು ಮಿಂಚಿದರು. ಯಶ್ ದುಬೆ (133) ಮತ್ತು ಶುಭಂ ಶರ್ಮಾ (116) ಸಿಡಿಸಿ ತಂಡದ ಚೇಸಿಂಗ್‌ ಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆ ಬಳಿಕ ಕ್ರಿಸ್‌ ಗೆ ಇಳಿದ ಆರ್ಸಿಬಿ ಆಟಗಾರ ರಜತ್ ಪಾಟಿದಾರ್ ರಣಜಿ ಟ್ರೋಫಿ ಫೈನಲ್‌ ನಲ್ಲಿಯೂ ತಮ್ಮ ಅಮೋಘ ಫಾರ್ಮ್ ಅನ್ನು ಮುಂದುವರೆಸಿದರು. 219 ಎಸೆತಗಳಲ್ಲಿ 122 ರನ್‌ ಸಿಡಿಸಿದ ರಜತ್‌ ಪಾಟೀದಾರ್‌ ಮಧ್ಯಪ್ರದೇಶದ ಕನಸಿಗೆ ಬಲ ತುಂಬಿದರು. ರಜತ್‌ ಇನಿಂಗ್ಸ್‌ ನಲ್ಲಿ 17 ಬೌಂಡರಿಗಳಿದ್ದವು. ರಜತ್‌ 52 ರನ್‌ಗಳಿಸಿದ್ದಾಗ ಅದೃಷ್ಠ ಅವರ ಕೈಹಿಡಿದಿತ್ತು.
ಶಮ್ಸ್ ಮುಲಾನಿ ಎಸೆತದಲ್ಲಿ ರಜತ್ ಕ್ಯಾಚ್‌ ನೀಡಿ ಔಟಾಗಿದ್ದರು. ಆದರೆ ಆ ಎಸೆತ ನೋಬಾಲ್‌ ಆಗಿತ್ತು. ಆ ಬಳಿಕ ಆಕ್ರಮಣಕಾರಿಯಾಗಿ ಆಡಿದ ರಜತ್‌ ಪಟೀದಾರ್‌  ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ ತಮ್ಮ ತಮ್ಮ ಎಂಟನೇ ಶತಕವನ್ನು ಸಿಡಿಸಿದರು. 29 ವರ್ಷದ ರಜತ್ ಪಾಟಿದಾರ್ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಭರ್ಜರಿ ಪ್ರದರ್ಶನ ತೋರಿದ್ದರು.
ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪ್ಲೇ ಆಫ್ ಎಲಿಮಿನೇಟರ್ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿ ಗಮನ ಸೆಳೆದಿದ್ದರು. ಐಪಿಎಲ್-2022 ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿದ್ದ ಪಾಟಿದಾರ್, ಒಂದು ಶತಕ, ಎರಡು ಅರ್ಧಶತಕಗಳ ಸಹಿತ 333 ರನ್ ಕಲೆ ಹಾಕಿದ್ದರು. ರಜತ್‌ ಆಟ ಕಣ್ತುಂಬಿಕೊಂಡ ಬೆಂಗಳೂರು ಪ್ರೇಕ್ಷಕರು ಪಂದ್ಯದುದ್ದಕ್ಕೂ  “ಆರ್ಸಿಬಿ ಆರ್ಸಿಬಿ ಆರ್ಸಿಬಿ” ಎಂದು ಕೂಗುತ್ತಾ ಹುರಿದುಂಬಿಸಿದರು.

ಈ ಸೀಜನ್‌ ನಲ್ಲಿ ರಜತ್‌ ಪಾಟೀದಾರ್‌ ಎರಡನೇ ಶತಕವಿದು. ಇದಕ್ಕೂ ಮುನ್ನ 162 ರನ್‌ ಸಿಡಿಸಿದ್ದರು. ಐದು ಟರ್ಧಶತಕಗಳನ್ನು ಸಹ ಸಿಡಿಸಿದ್ದಾರೆ. ಈ ಮುನ್ನ ಕ್ವಾರ್ಟರ್ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ 85 ಮತ್ತು ಸೆಮಿ ಫೈನಲ್‌ನಲ್ಲಿ ಬಂಗಾಳ ವಿರುದ್ಧ 79 ರನ್ ಗಳಿಸಿದ್ದ ಪಾಟಿದಾರ್ ಮಧ್ಯಪ್ರದೇಶವನ್ನು ರಣಜಿ ಟ್ರೋಫಿ ಫೈನಲ್‌ ನಡೆಗೆ ಮುನ್ನಡೆಸಿದ್ದರು. ಅಲ್ಲದೇ ರಜತ್‌ ಟೂರ್ನಿಯಲ್ಲಿ 600ಕ್ಕೂ ಹೆಚ್ಚಿನ ರನ್‌ ಕಲೆಹಾಕಿದ್ದು, ಅತಿಹೆಚ್ಚಿನ ರನ್‌ ಸಿಡಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಮುನ್ನ ಮಧ್ಯಪ್ರದೇಶ 529 ರನ್ ಗಳಿಗೆ 9 ವಿಕೆಟ್‌ ಕಳೆದುಕೊಂಡಿದ್ದು ಬರೋಬ್ಬರಿ 155 ರನ್‌ ಗಳ ಮುನ್ನಡೆ ಪಡೆದುಕೊಂಡಿದೆ. ಪಂದ್ಯ ಪಂದ್ಯ ಡ್ರಾಗೊಂಡರೂ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಮಧ್ಯಪ್ರದೇಶ ರಣಜಿ ಚಾಂಪಿಯನ್ ಪಟ್ಟಕ್ಕೇರುವುದು ಬಹುತೇಕ ಖಚಿವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!