ಅತ್ಯಾಚಾರ: ಆರೋಪಿಗೆ 10 ವರ್ಷ ಕಠಿಣ ಸಜೆ, ದಂಡ

ಹೊಸದಿಗಂತ ವರದಿ,ಮಂಗಳೂರು:

ಸಂಬಂಧಿಕಳಾದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ ೨ ನೇ ತ್ವರಿತಗತಿ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗೆ ೧೦ ವರ್ಷ ಕಠಿಣ ಸಜೆ ಮತ್ತು ೨೫,೦೦೦ ರೂ. ದಂಡ ವಿಧಿಸಲಾಗಿದೆ.
ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಬೊಳ್ಳರಮಜಲು ನಿವಾಸಿ ಪ್ರಸಾದ್ (೩೧) ಶಿಕ್ಷೆಗೊಳಗಾದ ಆರೋಪಿ. ಈತನ ಮೇಲೆ ಇದ್ದ, ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸತತವಾಗಿ ಸುಮಾರು ಒಂದು ವರ್ಷ ಕಾಲ ಅತ್ಯಾಚಾರ ನಡೆಸಿದ ಆರೋಪ ಸಾಬೀತಾಗಿದೆ.
ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಪ್ರಸಾದ್ ಮನೆಗೆ ಆತನ ಸಂಬಂಧಿಕಳೇ ಆಗಿರುವ ೧೭ ವರ್ಷದ ಬಾಲಕಿ ಮನೆ ಕೆಲಸಕ್ಕಾಗಿ ಆಗಿಂದಾಗ್ಗೆ ಬರುತ್ತಿದ್ದು, ೨೦೧೮ ಜುಲೈ ೨೮ ರಂದು ಆಕೆ ಮನೆಗೆ ಬಂದಾಗ ಆಕೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದನು. ಆ ಬಳಿಕ ಪದೇ ಪದೇ ಆತ ಅತ್ಯಾಚಾರ ನಡೆಸಿದ್ದ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿತ್ತು. ಒಂದೊಮ್ಮೆ ಆಕೆ ಪ್ರತಿಭಟಿಸಿದಾಗ ಆತ ಆಕೆಯ ಮೇಲೆ ಹಲ್ಲೆ ನಡೆಸಿದ್ದನು. ಇದರಿಂದ ಬಾಲಕಿಯ ತಾಯಿ ಮತ್ತು ಅಣ್ಣನಿಗೆ ವಿಷಯ ಗೊತ್ತಾಗಿತ್ತು. ಬಳಿಕ ಮನೆ ಮಂದಿಯ ಸಲಹೆಯಂತೆ ಬಾಲಕಿ ೨೦೧೯ ಜೂ. ೧೩ ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಳು. ಪೊಲೀಸರು ಆರೋಪಿ ಪ್ರಸಾದ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇನ್ಸ್‌ಪೆಕ್ಟರ್‌ಗಳಾದ ಮಂಜುನಾಥ್ ಡಿ. ಮತ್ತು ನಾಗೇಶ್ ಕೆ. ಅವರು ತನಿಖೆ ಪೂರ್ತಿಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ ೨ ನೇ ತ್ವರಿತಗತಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಕೆ. ರಾಧಾಕೃಷ್ಣ ಅವರು ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಮಾ. ೨೨ ರಂದು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಪೊಕ್ಸೊ ಕಾಯ್ದೆಯ ಕಲಂ ೬ ರನ್ವಯ ಆರೋಪಿಗೆ ೧೦ ವರ್ಷ ಕಠಿಣ ಶಿಕ್ಷೆ ಮತ್ತು ೨೫,೦೦೦ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ ೨ ತಿಂಗಳ ಸಜೆ, ಐಪಿಸಿ ಸೆ. ೫೦೬ (ಕೊಲೆ ಬೆದರಿಕೆ) ಅನ್ವಯ ೧ ವರ್ಷ ಸಜೆ, ಐಪಿಸಿ ಸೆಕ್ಷನ್ ೩೨೩ (ಹಲ್ಲೆ) ಅನ್ವಯ ೬ ತಿಂಗಳ ಸಜೆಯನ್ನು ವಿಧಿಸಲಾಗಿದೆ. ಈ ಮೂರೂ ಶಿಕ್ಷೆಗಳನ್ನು ಏಕ ಕಾಲದಲ್ಲಿ ಅನುಭವಿಸಬೇಕಾಗಿದೆ.
ಸಂತ್ರಸ್ತ ಬಾಲಕಿಗೆ ಸರಕಾರದ ವತಿಯಿಂದ ೪ ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ದೊರಕಿಸಿ ಕೊಡುವಂತೆಯೂ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣ ಸ್ವಾಮಿ ಅವರು ವಾದಿಸಿದ್ದರು. ೧೬ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ೧೯ ದಾಖಲೆಗಳನ್ನು ಪರಿಶೀಲಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!