ಹೊಸದಿಗಂತ ಅಂಕೋಲಾ:
ತಾಲೂಕಿನ ಹೊನ್ನೆಬೈಲ್ ಕಡಲ ತೀರದಲ್ಲಿ ಗ್ರೀನ್ ಸೀ ಟರ್ಟಲ್ ಪ್ರಭೇದದ ಕಡಲಾಮೆಯ ಕಳೆಬರ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ
ಪತ್ತೆಯಾಗಿದೆ.
ಅರಣ್ಯ ಇಲಾಖೆಯ ಸಾಗರ ಜೀವಿ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪಶು ವೈದ್ಯಕೀಯ ಸಿಬ್ಬಂದಿಗಳು ಭೇಟಿ ನೀಡಿದರಾದರೂ ಆಮೆ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ಕಡಲ ತೀರದಲ್ಲಿ ಹೊಂಡ ತೋಡಿ ಸಂಸ್ಕಾರ ನಡೆಸಲಾಯಿತು.
ಅಳಿವಿನಂಚಿನ ಪ್ರಭೇದಗಳ ಪಟ್ಟಿಯಲ್ಲಿ ಇರುವ ಗ್ರೀನ್ ಸೀ ಟರ್ಟಲ್ ಆಮೆಗಳು ಸಾಮಾನ್ಯವಾಗಿ ಉಷ್ಣವಲಯದ ದ್ವೀಪ ಪ್ರದೇಶಗಳ ಸಮೀಪ ವಾಸಿಸುತ್ತಿದ್ದು ರಾಜ್ಯದ ಕರಾವಳಿ ತೀರಗಳಲ್ಲಿ ಕಾಣಸಿಗುವುದು ತುಂಬಾ ಅಪರೂಪ ಮೃತ ಆಮೆ ಯಾವುದೋ ಕಾರಣದಿಂದ ತೀವ್ರ ಗಾಯಗೊಂಡು ಮೃತ ಪಟ್ಟಿರುವ ಸಾಧ್ಯತೆ ಇದ್ದು ಸಮುದ್ರದಲ್ಲಿ ತೇಲಿ ಬಂದ ಆಮೆ ಕಳೆಬರವನ್ನು ಕಡಲ ಅಲೆಗಳು ಹೊನ್ನೆಬೈಲ್ ಬಳಿ ಎಸೆಯಲ್ಪಟ್ಟಿರಬಹುದು ಎನ್ನಲಾಗುತ್ತಿದೆ.
ಕಾರವಾರ ಅಂಕೋಲಾ ಸುತ್ತ ಮುತ್ತಲಿನ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರೂಪದ ಕಡಲ ಜೀವಿಗಳು ಮೃತ ಸ್ಥಿತಿಯಲ್ಲಿ ಪತ್ತೆಯಾಗುತ್ತಿದ್ದು ಕೆಲವು ದಿನಗಳ ಹಿಂದೆ ಕಾರವಾರ ಕಡಲ ತೀರದಲ್ಲಿ ಓಲಿವ್ ರೆಡ್ಲಿ ಕಡಲಾಮೆಯ ಕಳೆಬರ ಮೃತ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಅದಲ್ಲದೇ ಭಾವಿಕೇರಿ ಮತ್ತು ಬೆಳಂಬಾರ ಕಡಲ ತೀರಗಳಲ್ಲಿ ಓಶಿಯನ್ ಹಂಪ್ ಬ್ಯಾಕ್ ಡಾಲ್ಫಿನ್ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.



