ಶಿವಮೊಗ್ಗ ಆಸ್ಪತ್ರೆಯಲ್ಲಿ ಅಪರೂಪದ ಕ್ಷಣ: ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಹೊಸದಿಗಂತ ವರದಿ,ಶಿವಮೊಗ್ಗ:

ನಗರದ ಖಾಸಗಿ ಆಸ್ಪತ್ರೆ ಒಂದರಲ್ಲಿ ಮಹಿಳೆಯೋರ್ವರು ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು ಜಿಲ್ಲೆಯ ಇತಿಹಾಸದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಜನ್ಮ ನೀಡಿರುವುದು ದಾಖಲಾಗಿದೆ.
ಭದ್ರಾವತಿ ತಾಲೂಕಿನ ತಡಸ ಗ್ರಾಮದ ಆರೀಫ್ ಎಂಬುವರ ಪತ್ನಿ ಅಲ್ಮಾಜ್ ಬಾನು(22) ಈ ದಾಖಲೆಗೆ ಪಾತ್ರರಾಗಿದ್ದಾರೆ. ನಗರದ ಸರ್ಜಿ ಆಸ್ಪತ್ರೆಗೆ ದಾಖಲಾಗಿದ್ದ ಇವರು, ಸೋಮವಾರ ಬೆಳಿಗ್ಗೆ 7.30 ಕ್ಕೆ ನಾಲ್ವರು ಮಕ್ಕಳಿಗೆ ಜನ್ಮ ನೀಡಿದರು. ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಹಾಗೂ ನಾಲ್ವರು ಮಕ್ಕಳು ಆರೋಗ್ಯವಾಗಿದ್ದಾರೆ. ಜನಿಸಿದವರಲ್ಲಿ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಸರ್ಜಿ ಆಸ್ಪತ್ರೆಯ ಹಿರಿಯ ಸ್ತ್ರೀ ಮತ್ತು ಪ್ರಸೂತಿ ತಜ್ನೆ ಡಾ.ಚೇತನಾ ಈ ಹೆರಿಗೆ ಮಾಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಡಾ.ಚೇತನಾ, ಇದೊಂದು ಅಪರೂಪದ ಸಂದರ್ಭ. ಸುಮಾರು 5 ಲಕ್ಷ ಪ್ರಕರಣಗಳಿಗೆ ಒಂದು ಇಂತಹ ಪ್ರಕರಣ ಕಾಣ ಸಿಗುತ್ತದೆ. ಅನುವಂಶೀಯ ಅಂಶಗಳು ಇದಕ್ಕೆ ಕಾರಣ. ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಸಂದರ್ಭ ತುಂಬಾ ರಕ್ತಸ್ರಾವದ ಅಪಾಯ ಕೂಡ ಇಂತಹ ಪ್ರಕರಣಗಳಲ್ಲಿ ಇರುತ್ತದೆ. ಎಲ್ಲಾ ವೈದ್ಯರ ಸಹಕಾರದಿಂದ ಹೆರಿಗೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯ ನವಜಾತ ಶಿಶು ಮತ್ತು ಮಕ್ಕಳ ತಜ್ನ ಡಾ.ಅನಿಲ್ ಕಲ್ಲೇಶ್ ಮಾತನಾಡಿ, ನಾಲ್ಕೂ ಶಿಶುಗಳ ತೂಕ ಕ್ರಮವಾಗಿ 1.1 ಕೆಜಿ, 1.2 ಕೆಜಿ, 1.3 ಕೆಜಿ ಹಾಗೂ 1.8 ಕೆಜಿ ಇದೆ. ನಾಲ್ಕೂ ಮಕ್ಕಳಿಗೆ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಂಗರೂ ಮದರ್ ಕೇರ್ ಅಳವಡಿಸಿದ್ದು, ನಾಲ್ಕೂ ಆರೋಗ್ಯದಿಂದ ಕೂಡಿವೆ ಎಂದು ತಿಳಿಸಿದರು. ಆಸ್ಪತ್ರೆ ಮುಖ್ಯಸ್ಥ ಡಾ.ಧನಂಜಯ ಸರ್ಜಿ ಈ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!