ರಾಷ್ಟ್ರೋತ್ಥಾನ ʼಕನ್ನಡ ಪುಸ್ತಕ ಹಬ್ಬʼಕ್ಕೆ ಚಾಲನೆ: ತಿಂಗಳ ಕಾಲ ನಡೆಯಲಿದೆ ಪುಸ್ತಕಗಳ ಮಾರಾಟ, ಪ್ರದರ್ಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯವು ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ʼಕನ್ನಡ ಪುಸ್ತಕ ಹಬ್ಬʼವನ್ನು ಕೆಂಪೇಗೌಡ ನಗರದ ಕೇಶವ ಶಿಲ್ಪ ಸಭಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.
ಅ.29 ರಿಂದ ಆರಂಭಿಸಿ ನವೆಂಬರ್‌ 27 ರ ವರೆಗೆ 1 ತಿಂಗಳ ಕಾಲ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಹಬ್ಬದಲ್ಲಿ ಕನ್ನಡ ಪುಸ್ತಕ ಪ್ರದರ್ಶನ, ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮಗಳು ಇರಲಿವೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೆ ಇತರೆ ಪ್ರಸಿದ್ಧ ಸಾಹಿತ್ಯಗಳು ಲಭ್ಯವಿದ್ದು, ಶೇ.50 ರ ವರೆಗೂ ರಿಯಾಯಿತಿ ಸಿಗಲಿದೆ.
ಕಾರ್ಯಕ್ರಮದಲ್ಲಿ ಡಾ. ನಿರಂಜನ ವಾನಳ್ಳಿಯವರು ಮಾತನಾಡಿ, ʼಕನ್ನಡದಲ್ಲಿ ಆಧ್ಯಾತ್ಮಿಕ ಸಾಹಿತ್ಯಕ್ಕೆ ರಾಮಕೃಷ್ಣ ಆಶ್ರಮ ಹಾಗೂ ರಾಷ್ಟ್ರಪ್ರಜ್ಞೆಯ ಸಾಹಿತ್ಯಕ್ಕೆ ರಾಷ್ಟ್ರೋತ್ಥಾನ ಸಾಹಿತ್ಯವು ನೀಡಿರುವ ಗುರುತರ ಕೊಡುಗೆಗಳನ್ನು ಸ್ಮರಿಸಿದರು. ಪ್ರಸ್ತುತ ಕಾಲಘಟ್ಟದಲ್ಲಿ ಬರೆಯುವವರು ಹಾಗೂ ಓದುವವರು ಕಡಿಮೆಯಾಗಿಲ್ಲ. ಆದರೆ, ಅವರ ನಡುವೆ ಸರಿಯಾದ ಕೊಂಡಿ ಏರ್ಪಟ್ಟು, ಹಳ್ಳಿಹಳ್ಳಿಗೂ ಕನ್ನಡ ಪುಸ್ತಕಗಳು ತಲುಪಿ, ಕನ್ನಡ ಸಾಹಿತ್ಯದ ನಿರಾಶಾದಾಯಕ ಪರಿಸ್ಥಿತಿ ಸುಧಾರಣೆ ಕಾಣುವುದು ಇಂದಿನ ಜರೂರಾಗಿದೆʼ ಎಂದು ಅವರು ಅಭಿಪ್ರಾಯಪಟ್ಟರು.
ʼಈ ದಿಸೆಯಲ್ಲಿ ರಾಷ್ಟ್ರೋತ್ಥಾನ, ನವ ಕರ್ನಾಟಕದಂತಹ ಪ್ರಕಾಶನಗಳು ಸಕ್ರಿಯವಾಗಿದ್ದು, ಈ ಕಾರ್ಯ ಇನ್ನೂ ದೊಡ್ಡ ಸ್ತರದಲ್ಲಿ ನಡೆಯಬೇಕುʼ ಎಂದು ಆಶಿಸಿದರು.
ಖ್ಯಾತ ಸಾಹಿತಿ ಹಾಗೂ ಅಂಕಣಕಾರ ಪ್ರೋ . ಪ್ರೇಮಶೇಖರ ʼ60 ರ ದಶಕದಲ್ಲಿ ರೂಪುತಾಳಿದ ರಾಷ್ಟ್ರೋತ್ಥಾನ ಸಾಹಿತ್ಯ ಒಂದು ಐತಿಹಾಸಿಕ ಅಗತ್ಯವಾಗಿತ್ತುʼ ಎಂದು ಹೇಳಿದರು. ʼಇಂದಿನ ದಿನಗಳಲ್ಲಿ ʼಸಾಂಸ್ಕೃತಿಕ ಹೊಡೆತಗಳನ್ನುʼ ಎದುರಿಸಲು ರಾಷ್ಟ್ರೋತ್ಥಾನ ಸಾಹಿತ್ಯವು ಹಿಂದೆಂದಿಗಿಂತಲೂ ಸಶಕ್ತವಾಗಿದೆʼ ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯಾ ನಂತರ ಬರೆಯಲಾದ ಇತಿಹಾಸ ಕೇವಲ ಕಾಂಗ್ರೆಸ್ ಕೇಂದ್ರೀಕೃತವಾಗಿರುವಂತೆ ನೋಡಿಕೊಂಡು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಲಕ್ಷಾಂತರ ಯುವಕರ ಬಲಿದಾನಗಳನ್ನು ಮುಚ್ಚಿ ಹಾಕಲಾಗಿದೆ. ನಂತರದ ದಿನಗಳಲ್ಲಿ ಇಂತಹ ಅಪೂರ್ಣ ಜ್ಞಾನದಿಂದ ಭಾರತದ ಸಮಸ್ಯೆಗಳನ್ನು ಅವಲೋಕಿಸಿ, ಪರಿಹಾರಕ್ಕಾಗಿ ಎಡಪಂಥದತ್ತ ನೋಡುವಂತಾಗಿದ್ದು ದುರಂತ ಎಂದರು. ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ನಾ. ದಿನೇಶ್‌ ಹೆಗ್ಡೆ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!