ಹೊಸದಿಗಂತ ವರದಿ ಹುಬ್ಬಳ್ಳಿ:
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಡಿತರ ಚೀಟಿ ವಿತರಣೆ ಸ್ಥಗಿತಗೊಂಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಕಾರ್ಯ ಆರಂಭಿಸಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ನಗರದ ಪ್ರವಾಸ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್, ಎಪಿಎಲ್ ಸೇರಿ ರಾಜ್ಯದಲ್ಲಿ ಒಟ್ಟು 2.95 ಲಕ್ಷ ಅರ್ಜಿಗಳು ಬಂದಿವೆ. ಅವುಗಳನ್ನು ಸೂಕ್ತವಾಗಿ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ನೀಡುತ್ತೇವೆ ಎಂದರು.
ಕೆಲ ಸರ್ಕಾರಿ ನೌಕರರು, ಸ್ಥಿತಿವಂತರು ಸಹ ಪಡಿತರ ಚೀಟಿಗಳನ್ನು ಹೊಂದಿರುವುದು ತಿಳಿದು ಬಂದಿದ್ದು, ಅಂತಹವರನ್ನು ಕಂಡುಹಿಡಿದು ಅವರ ಪಡಿತರ ಚೀಟಿ ಸ್ಥಗಿತಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಸೂಕ್ತವಾಗಿ ನಿಭಾಯಿಸಿಕೊಂಡು ಬಂದಿದೆ. ಸದ್ಯ ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯ ಸರ್ಕಾರಕ್ಕೆ ಇದೆ. ಐದು ಗ್ಯಾರಂಟಿಗೋಸ್ಕರ 50 ಸಾವಿರ ಕೋಟಿ ಮೀಸಲಿಡಲಾಗಿದ್ದು, ಬರುವ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಯೋಜನೆ ಸಹ ಕೈಗೊಳ್ಳುತ್ತೇವೆ ಎಂದರು.
ನ್ಯಾಷನಲ್ ಪುಡ್ ಸೆಕ್ಯುರಿಟಿ ಕಾಯ್ದೆಯನ್ನು ಯುಪಿಎ ಸರ್ಕಾರ ಜಾರಿಗೆ ತಂದಿದೆ. ದೇಶದಲ್ಲಿ ಯಾವ ಪ್ರಜೆಯು ಉಪವಾಸದಿಂದ ಬಳಲಬಾರದು ಎಂಬುವುದು ಈ ಕಾಯ್ದೆ ಉದ್ದೇಶ. ಅದರಂತೆ ಕಾಂಗ್ರೆಸ್ ಅನ್ನ ಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸದ್ಯ ರಾಜ್ಯದಲ್ಲಿ ಅಕ್ಕಿ ಕೊರತೆಯಿದ್ದು, ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೆವು. ಅವರು ಈ ವಿಚಾರವಾಗಿ ರಾಜಕೀಯ ಮಾಡಿದರು. ಆದರೆ ಪರ್ಯಾಯವಾಗಿ ಜನರಿಗೆ ಹಣ ನೀಡಿದ್ದೇವೆ. ಬರುವ ದಿನಗಳಲ್ಲಿ ಹಣ ಬದಲಿ ಅಕ್ಕಿ ನೀಡುವ ಉದ್ದೇಶದಿಂದ ಆಂಧ್ರಪ್ರದೇಶ, ಛತ್ತಿಸಘಡ ಹಾಗೂ ತೆಲಂಗಾಣ ರಾಜ್ಯದಲ್ಲಿ ಅಕ್ಕಿ ನೀಡಲು ಕೇಳಿದ್ದೇವೆ ಎಂದರು.
ಪಡಿತರ ವಿತರಕರು ಸಹ ಭೇಟಿಯಾಗಿ ತಮ್ಮ ಬೇಡಿಕೆ ಈಡೇರಿಸಲು ಮನವಿ ಸಲ್ಲಿಸಿದ್ದಾರೆ. ಅವರೊಂದಿಗೆ ಮಾತನಾಡಿದ್ದು, ಸಮಸ್ಯೆ ಪರಿಹರಿಸುತ್ತೇವೆ. ಅಕ್ಕಿ ಬದಲು ಹಣ ನೀಡಿದ್ದರಿಂದ ಅವರಿಗೆ ಸಮಸ್ಯೆಯಾಗಿದೆ ಎಂದು ಹೇಳಿದರು.