ಉರುಳುತ್ತಾ ರಾಹುಲ್ ಗಾಂಧಿ ಪಡೆಯ ಇನ್ನೊಂದು ವಿಕೆಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಒಂದು ಕಾಲದಲ್ಲಿ ಕಾಂಗ್ರೆಸ್‌ನ ಯುವ ರಾಜ ರಾಹುಲ್ ಗಾಂಧಿಗೆ ಆಪ್ತರಾಗಿದ್ದ ಪಂಜಾಬ್ ಸಂಸದ ರವನೀತ್ ಸಿಂಗ್ ಬಿಟ್ಟು ಭಾರತೀಯ ಜನತಾ ಪಾರ್ಟಿ ಸೇರುತ್ತಾರಾ? ಅವರ ಭವಿಷ್ಯದ ನಡೆಗಳ ಬಗ್ಗೆ ಊಹಾಪೋಹಗಳು ಎದ್ದಿವೆ. ಇದಕ್ಕೆ ಕಾರಣ ಒಂದು ಭೇಟಿ.

ಹೌದು, ಲೂಧಿಯಾನದ ಹಾಲಿ ಕಾಂಗ್ರೆಸ್ ಸಂಸದ ಬಿಟ್ಟು ಸೋಮವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಫೋಟೋಗಳನ್ನು ಟ್ವೀಟ್ ಮಾಡಿದ ಬಿಟ್ಟು, ಪಂಜಾಬ್‌ನ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ವಿರೋಧ ಪಕ್ಷದ ಸಂಸದರು ಸಂಸದೀಯ ಅಥವಾ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ಪ್ರಧಾನಿ ಅಥವಾ ಕೇಂದ್ರ ಸಚಿವರನ್ನು ಭೇಟಿ ಮಾಡಿದರೂ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದಿಲ್ಲ. ಆದರೆ ರವನೀತ್ ಸಿಂಗ್ ಬಿಟ್ಟು ಅವರ ಈ ನಡೆ, ಇನ್ನೇನನ್ನೋ ಹೇಳ ಹೊರಟಂತಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೇ 46ರ ಹರೆಯದ ಬಿಟ್ಟು ಅವರು ನವಜೋತ್ ಸಿಂಗ್ ಸಿಧು ಅವರನ್ನು ಟೀಕಿಸಿದವರಲ್ಲಿ ಒಬ್ಬರು. ಅವರಿಗೆ ಪಂಜಾಬ್‌ನಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದಕ್ಕಾಗಿ ಅಸಮಾಧಾನಗೊಂಡಿದ್ದಾರೆ.

ಯಾರು ಈ ರವನೀತ್ ಸಿಂಗ್ ಬಿಟ್ಟು?

ಸಿಖ್ ಉಗ್ರಗಾಮಿಗಳಿಂದ ಹತ್ಯೆಗೀಡಾದ ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ ಬಿಟ್ಟು. ಅವರು ಲೋಕಸಭೆಗೆ ಲೂಧಿಯಾನದಿಂದ ಮತ್ತು ಅದಕ್ಕೂ ಮೊದಲು ಆನಂದಪುರ ಸಾಹಿಬ್‌ನಿಂದ ಆಯ್ಕೆಯಾಗಿದ್ದರು. ಅವರು 2009, 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಕಳೆದ ವರ್ಷ ಜನವರಿಯಲ್ಲಿ ‘ಜನ್ ಸಂಸದ್’ ಕಾರ್ಯಕ್ರಮದ ಸಂದರ್ಭದಲ್ಲಿ ಸಿಂಘು ಗಡಿಯಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಯಿತು. ಮಾರ್ಚ್ 2021ರಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾಗ, ಲೋಕಸಭೆಯಲ್ಲಿ ಬಿಟ್ಟು ಅವರನ್ನು ‘ಕಾಂಗ್ರೆಸ್ ನಾಯಕ’ ಎಂದು ನೇಮಿಸಲಾಗಿತ್ತು.

ಇತ್ತೀಚೆಗೆ ನಡೆದ ಪಂಜಾಬ್ ಚುನಾವಣೆಯಲ್ಲಿ ಎಪಿಪಿ ಭರ್ಜರಿ ಜಯ ದಾಖಲಿಸಿದ್ದು, ಆಡಳಿತ ನಡೆಸುತ್ತಿದೆ. ಕಾಂಗ್ರೆಸ್‌ಗೆ ಕೇವಲ 18 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. 2017ರಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗಳಿಸಿತ್ತು. ಈಚೆಗೆ ನಡೆದ ಚುನಾವಣೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಬಲಹೀನವಾಗಿರುವುದನ್ನು ಬಹಿರಂಗಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!