ಹೊಸದಿಗಂತ ವರದಿ ರಾಯಚೂರು:
ಮಂತ್ರಾಲಯ ರಾಘವೇಂದ್ರ ಸ್ವಾಮೀಜಿಗಳ 355ನೇ ಆರಾಧನಾ ಕಾರ್ಯಕ್ರಮದ ಅಂಗವಾಗಿ ರಾಯರ ಪೂರ್ವಾರಾಧನೆಯ ಸಂದರ್ಭದಲ್ಲಿ, ತಮಿಳುನಾಡಿನ ಶ್ರೀರಂಗಂ ದೇವಾಲಯದಿಂದ ತರಲಾದ ಶ್ರೀರಂಗನಾಥ ಸ್ವಾಮಿಯ ಪವಿತ್ರ ಶೇಷವಸ್ತ್ರವನ್ನು ಮಠದ ಪೀಠಾಧಿಪತಿಗಳು ಸ್ವೀಕರಿಸಿದರು.
ಶ್ರೀರಂಗನಾಥ ಸ್ವಾಮಿ ದೇವಾಲಯದ ಅಧಿಕಾರಿಗಳು ತಂದ ಪವಿತ್ರ ಶೇಷವಸ್ತ್ರವನ್ನು ಮಠದ ಮುಖ್ಯದ್ವಾರದಲ್ಲಿ ಮಂತ್ರಾಲಯದ ಅಧಿಕಾರಿಗಳು ಸಕಲ ವಾದ್ಯಗಳೊಂದಿಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಂತ್ರಾಲಯದ ಪೀಠಾಧ್ಯಕ್ಷ ಸುಬುಧೇಂದ್ರತೀರ್ಥ ಸ್ವಾಮೀಜಿ ಅವರು ಸಾಂಪ್ರದಾಯಿಕವಾಗಿ ಶೇಷವಸ್ತ್ರವನ್ನು ಸ್ವೀಕರಿಸಿದರು. ಬಳಿಕ ಪವಿತ್ರ ಶೇಷವಸ್ತ್ರವನ್ನು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಸಮರ್ಪಿಸಲಾಯಿತು.
ನಂತರ ಶ್ರೀರಂಗಂ ದೇವಾಲಯದ ಅಧಿಕಾರಿಗಳು ಪರಮಪೂಜ್ಯ ಶ್ರೀ ಸ್ವಾಮೀಜಿಯವರಿಗೆ ಪ್ರಸಾದ ಹಾಗೂ ವಸ್ತ್ರವನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಸ್ವಾಮೀಜಿಯವರು ಅಧಿಕಾರಿಗಳಿಗೆ ಆಶೀರ್ವಾದ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂತ್ರಾಲಯದ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ, “ಎಂಟು ಸುಕ್ಷೇತ್ರಗಳಲ್ಲಿ ಒಂದಾದ ಶ್ರೀರಂಗನಾಥ ದೇವಾಲಯದ ಪವಿತ್ರ ಶೇಷವಸ್ತ್ರ ಇಂದು ಮಂತ್ರಾಲಯಕ್ಕೆ ಆಗಮಿಸಿದೆ. ರಂಗನಾಥರು ವಿಷ್ಣುವಿನ ವಿಶೇಷ ರೂಪವಾಗಿದ್ದು, ಶೇಷಶಾಯಿಯಾಗಿ ಯೋಗನಿದ್ರೆಯನ್ನು ಸವಿಯುತ್ತಿದ್ದಾರೆ. ಇಂತಹ ಪುಣ್ಯಕ್ಷೇತ್ರಕ್ಕೂ ಮಂತ್ರಾಲಯದ ರಾಯರ ಮಠಕ್ಕೂ ಅವಿನಾಭಾವ ಸಂಬಂಧವಿದೆ,” ಎಂದರು.
“ರಾಯರ ಆರಾಧನೆಯ ಸಂದರ್ಭದಲ್ಲಿ ಶ್ರೀರಂಗಂ ದೇವಾಲಯದಿಂದ ಸತ್ ಸಂಪ್ರದಾಯದಂತೆ ಪ್ರತಿವರ್ಷ ಪವಿತ್ರ ಶೇಷವಸ್ತ್ರವನ್ನು ಪ್ರಸಾದದ ರೂಪದಲ್ಲಿ ಕಳುಹಿಸಲಾಗುತ್ತಿದೆ. ವಸ್ತ್ರದ ರೂಪದಲ್ಲಿ ರಂಗನಾಥನೇ ಇಲ್ಲಿಗೆ ಆಗಮಿಸಿದ್ದಾನೆ ಎಂಬ ಭಾವ ಮೂಡುತ್ತಿದೆ,” ಎಂದು ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.



