May 28, 2026
Thursday, May 28, 2026
spot_img

ಚಿನ್ನದ ಸಾಲಕ್ಕೆ ಸಿಬಿಲ್ ಸ್ಕೋರ್ ಕಡ್ಡಾಯ: ಭಾರತೀಯ ರಿಸರ್ವ್ ಬ್ಯಾಂಕ್‌ನ ಹೊಸ ನಿಯಮಾವಳಿಗೆ ರೈತ ಸಂಘಟನೆಗಳ ತೀವ್ರ ವಿರೋಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯಾಂಕುಗಳಲ್ಲಿ ಚಿನ್ನದ ಸಾಲ ಪಡೆಯಲು ಸಿಬಿಲ್ (CIBIL) ಸ್ಕೋರ್ ಮತ್ತು ಆದಾಯ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಹೊಸ ನಿಯಮಗಳ ವಿರುದ್ಧ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ನೇತೃತ್ವದ ನಿಯೋಗವು ಬೆಂಗಳೂರಿನ ಆರ್‌ಬಿಐ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ, ಈ ರೈತ ವಿರೋಧಿ ಕ್ರಮಗಳನ್ನು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು.

ಇದನ್ನೂ ಓದಿ:

“ಆಪತ್ಕಾಲದಲ್ಲಿ ರೈತರಿಗೆ ಆಸರೆಯಾಗುತ್ತಿದ್ದ ಚಿನ್ನದ ಸಾಲಕ್ಕೆ ಇಂತಹ ಕಠಿಣ ನಿರ್ಬಂಧ ಹೇರಿರುವುದು ಅವರನ್ನು ಖಾಸಗಿ ಲೇವಾದೇವಿದಾರರ ಸುಳಿಗೆ ಸಿಲುಕಿಸುವ ತಂತ್ರವಾಗಿದೆ” ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು. ಸಭೆಯಲ್ಲಿ ಪ್ರಮುಖವಾಗಿ ಸಾಲ ತೀರಿಸದ ರೈತರ ಆಸ್ತಿ ಜಪ್ತಿ ಮಾಡುವ ‘ಸರಫೇಸಿ’ (SARFAESI) ಕಾಯ್ದೆ ರದ್ದತಿ, ಕೃಷಿ ಸಾಲಗಳಿಗೆ ಸೇವಾ ಶುಲ್ಕ ವಿನಾಯಿತಿ ಮತ್ತು ರೈತರ ಮಕ್ಕಳ ಶೈಕ್ಷಣಿಕ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣಿಸಬಾರದು ಎಂಬ ಬೇಡಿಕೆಗಳನ್ನು ಮಂಡಿಸಲಾಯಿತು.

ಅಲ್ಲದೆ, ಸರ್ಕಾರದ ಸಬ್ಸಿಡಿ ಹಣವನ್ನು ಬ್ಯಾಂಕುಗಳು ಸಾಲದ ಖಾತೆಗೆ ಜಮೆ ಮಾಡಿಕೊಳ್ಳುವುದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಈ ಸಮಸ್ಯೆಗಳ ಕುರಿತು ಕೇಂದ್ರ ಕಚೇರಿಗೆ ವರದಿ ನೀಡಿ ಕ್ರಮ ಕೈಗೊಳ್ಳುವುದಾಗಿ ಆರ್‌ಬಿಐ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !