ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಬಿಸಿ ಇದೀಗ ಭಾರತದ ಆರ್ಥಿಕತೆಯ ಮೇಲೂ ತಟ್ಟಿದೆ. ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ಸುರಕ್ಷಿತವಾಗಿಡಲು ಮತ್ತು ಭವಿಷ್ಯದ ಆರ್ಥಿಕ ಹಿಂಜರಿತವನ್ನು ಎದುರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಳಿ ಇರುವ ಸುಮಾರು 12 ಬಿಲಿಯನ್ ಡಾಲರ್ ಮೌಲ್ಯದ ಚಿನ್ನದ ದಾಸ್ತಾನನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಪ್ರಮುಖ ವರದಿಗಳು ತಿಳಿಸಿವೆ.
ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ:
ಜಗತ್ತಿನಲ್ಲಿಯೇ ಅತಿ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ ಕಚ್ಚಾ ತೈಲದ ಬೆಲೆ ಗಗನಕ್ಕೇರುತ್ತಿದೆ. ಇದರ ನೇರ ಪರಿಣಾಮವಾಗಿ ಭಾರತದಿಂದ ವಿದೇಶಿ ಕರೆನ್ಸಿ ಹೊರಹೋಗುತ್ತಿದ್ದು, ಭಾರತೀಯ ರೂಪಾಯಿಯ ಮೌಲ್ಯವು ಡಾಲರ್ ಎದುರು ದಾಖಲೆ ಮಟ್ಟದ ಕುಸಿತ ಕಾಣುತ್ತಿದೆ. ಈ ನಷ್ಟವನ್ನು ಸರಿದೂಗಿಸಲು ಆರ್‌ಬಿಐ ತಕ್ಷಣದ ಕ್ರಮಕ್ಕೆ ಮುಂದಾಗಿದೆ.
ಚಿನ್ನ ಮಾರಿ ಕರೆನ್ಸಿ ಸಂಗ್ರಹಿಸಿದ ರಿಸರ್ವ್ ಬ್ಯಾಂಕ್:
ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಭಾರತ ಸರ್ಕಾರ ಹಾಗೂ ಆರ್‌ಬಿಐ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಈಗಾಗಲೇ ದೇಶದಲ್ಲಿ ಇಂಧನ ದರ ಏರಿಕೆ ಮಾಡಲಾಗಿದ್ದು, ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ಕೂಡ ಹೆಚ್ಚಿಸಲಾಗಿದೆ. ವರದಿಗಳ ಪ್ರಕಾರ, ಮೇ 22ರವರೆಗಿನ ಎರಡು ವಾರಗಳ ಅವಧಿಯಲ್ಲಿ ಆರ್‌ಬಿಐ ಸುಮಾರು 12 ಬಿಲಿಯನ್ ಡಾಲರ್ ಮೌಲ್ಯದ ಬಂಗಾರವನ್ನು ಮಾರಾಟ ಮಾಡಿದ್ದು, ಪ್ರತಿಯಾಗಿ 7.5 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ಕರೆನ್ಸಿ ಆಸ್ತಿಯನ್ನು ತನ್ನ ಬಳಿ ಸಂಗ್ರಹಿಸಿಟ್ಟುಕೊಂಡಿದೆ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಮಾರುಕಟ್ಟೆಯ ಏರಿಳಿತಗಳಿಗೆ ತಕ್ಕಂತೆ ರೂಪಾಯಿ ಮೌಲ್ಯವನ್ನು ಸ್ಥಿರವಾಗಿಡಲು ಆರ್‌ಬಿಐ ಇನ್ನಷ್ಟು ಹಣಕಾಸು ಕ್ರಮಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.



