IPL 2022: ಈ ಸಲ ಕಪ್‌ ಗೆಲ್ಲತ್ತಾ ಆರ್ಸಿಬಿ!? ಇಲ್ಲಿದೆ ತಂಡದ ಬಲ – ದೌರ್ಬಲ್ಯಗಳ ಮಾಹಿತಿ, ಬಲಿಷ್ಠ ಪ್ಲೇಯಿಂಗ್‌ XI

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ 26 ರಂದು ನಡೆಯಲಿರುವ ಚೆನೈ- ಕೊಲ್ಕತ್ತಾ ಪಂದ್ಯದ ಮೂಲಕ ʼಮನೋರಂಜನ್‌ ಕಾ ಬಾಪ್‌ʼ ಐಪಿಎಲ್‌ ನ 15ನೇ ಆವೃತ್ತಿಯ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
ರಾಯಲ್ ರಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ ಟೂರ್ನಿಯಲ್ಲಿ ಹೊಸ ನಾಯಕತ್ವದೊಂದಿಗೆ ಕಣಕ್ಕಿಳಿಯಲು ಸಂಪೂರ್ಣ ಸಜ್ಜಾಗಿದೆ. ಈ ಬಾರಿ ತಂಡದ ಚಹರೆಯೂ ಬದಲಾಗಿದೆ. ಅನೇಕ ಹೊಸ ಮುಖಗಳೊಂದಿಗೆ ಈ ಹಿಂದೆಯೂ ಆರ್ಸಿಬಿ ಪರ ಕಾಣಿಸಿಕೊಂಡಿದ್ದ ಕೆಲ ಆಟಗಾರರು ತಂಡಕ್ಕೆ ಮರಳಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಆರ್ಸಿಬಿ ಬಲಿಷ್ಠ ಆಟಗಾರರನ್ನು ಖರೀದಿಸುವಲ್ಲಿ ವಿಫಲವಾಯಿತು ಎಂಬ ಟೀಕೆಗಳಿದ್ದರೂ ಪ್ರಾಂಚೈಸಿಯು ಪ್ಲೆಯಿಂಗ್‌ ಇಲವೆನ್‌ ಗಮನದಲ್ಲಿಟ್ಟುಕೊಂಡು ಲೆಕ್ಕಾಚಾರ ಹಾಕಿ ಆಟಗಾರರನ್ನು ಖರೀದಿಸಿದೆ. ಆರ್ಸಿಬಿ ಪಾಲಿನ ಆಪತ್ಬಾಂದವ ಎಬಿಡಿ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಬಾರಿ ತಂಡದಲ್ಲಿದ್ದ ಭರವಸೆಯ ಆಟಗಾರ ದೇವ್‌ ದತ್‌ ಪಡಿಕ್ಕಲ್‌, ಸ್ಪಿನ್ ಮಾಂತ್ರಿಕ ಚಾಹಲ್‌ ಬೇರೆ ಪ್ರಾಂಚೈಸಿ ಸೇರಿದ್ದಾರೆ. ಹಾಗಿದ್ದರೂ ಆರ್ಸಿಬಿ ಮೇಲ್ನೋಟಕ್ಕೆ ಬಲಿಷ್ಠ ತಂಡವಾಗಿಯೇ ಕಾಣುತ್ತಿದೆ.

ಹಾಗಿದ್ದರೆ ಆರ್ಸಿಬಿ ಆರ್‌ಸಿಬಿ ತಂಡದ ಬಲಿಷ್ಠ ಪ್ಲೆಯಿಂಗ್‌ 11 ಹೇಗಿದೆ? ತಂಡದ ಬಲ ಹಾಗೂ ದೌರ್ಬಲ್ಯಗಳೇನು? ಓದಿ..

ಆರ್ಸಿಬಿ ಬಲಿಷ್ಠ ಆಡುವ ಬಳಗ ಹೀಗಿದೆ
1. ಫಾಫ್ ಡು ಪ್ಲೆಸಿಸ್ (ನಾಯಕ), 2. ವಿರಾಟ್, ಕೊಹ್ಲಿ, 3. ಸುಯೂಶ್‌ ಪ್ರಭುದೇಸಾಯಿ 4. ​​ಗ್ಲೆನ್ ಮ್ಯಾಕ್ಸ್‌ವೆಲ್ 5.ಮಹಿಪಾಲ್ ಲೊಮ್ರೋರ್ 6. ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್) 7. ವನಿಂದು ಹಸರಂಗ 8. ಶಹಬಾಜ್ ಅಹ್ಮದ್, 9. ಹರ್ಷಲ್ ಪಟೇಲ್, 10. ಮೊಹಮ್ಮದ್ ಸಿರಾಜ್, 11. ಜೋಶ್ ಹ್ಯಾಜಲ್‌ವುಡ್.

ಆರ್ಸಿಬಿ ತಂಡದ ಸಾಮರ್ಥ್ಯವೇನು?
ಆಂತರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಸಾಕಷ್ಟು ವರ್ಷಗಳಿಂದ ಮಿಂಚಿರುವ ಅನುಭವಿಗಳಾದ ಫಾಫ್‌, ವಿರಾಟ್‌, ಮ್ಯಾಕ್ಸ್‌ ವೆಲ್‌, ದಿನೇಶ್‌ ಕಾರ್ತಿಕ್‌ ಅಪಾರ ಅನುಭವ ಈ ಬಾರಿ ಆರ್ಸಿ ತಂಡಕ್ಕೆ ಖಂಡಿತ ನೆರವಾಗಲಿದೆ. ಕಳೆದ ಆರೇಳು ಆವೃತ್ತಗಳಲ್ಲಿ ವಿರಾಟ್‌ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಆರ್ಸಿಬಿ ಪ್ಲೇ ಆಫ್‌, ಫೈನಲ್‌, ಪ್ರವೇಶಿಸಿತ್ತಾದರೂ ಕಪ್‌ ಒಲಿಸಿಕೊಳ್ಳುವಲ್ಲಿ ಮಾತ್ರ ಸಫಲವಾಗಿಲ್ಲ. ಈ ಬಾರಿ ಫಾಫ್‌ ನಾಯಕತ್ವದಲ್ಲಿ ತಂಡ ಹೊಸ ಚೈತನ್ಯದಲ್ಲಿ ಕಣಕ್ಕಿಳಿಯಲಿದೆ. ನಾಯಕತ್ವ ಜವಾಬ್ದಾರಿಗಳನ್ನು ಕಳಚಿಕೊಂಡು ನಿರಾಳರಾಗಿರುವ ವಿರಾಟ್‌ ಅಬ್ಬರಿಸಿದರೆ ತಂಡದ ಕಪ್‌ ಬರ ನೀಗುವುದು ಖಚಿತ. ಟೂರ್ನಿಯಲ್ಲಿಯೇ ಅತ್ಯಂತ ಬಲಿಷ್ಠ ಬೌಲಿಂಗ್‌ ಪಡೆ ಹೊಂದಿರುವುದು ತಂಡಕ್ಕೆ ಪ್ಲಸ್‌ ಪಾಯಿಂಟ್.
ಕಳೆದ ವರ್ಷದ ಪರ್ಪಲ್‌ ಕ್ಯಾಪ್‌ ವಿನ್ನರ್‌ ಹರ್ಷಲ್‌ ಪಟೇಲ್‌, ಘಾತಕ ವೇಗಿ ಸಿರಾಜ್‌, ಚುಟುಕು ಕ್ರಿಕೆಟ್‌ ನ ಸ್ಪಿನ್‌ ಮೋಡಿಗಾರ ಹಸರಂಗ, ಐಸಿಸಿ ಟಿ.20 ನಂಬರ್‌ 2 ವೇಗಿ ಹ್ಯಾಜಲ್‌ವುಡ್ ಅವರಿರುವ ಭಾಗ ಈಗಾಗಲೇ ಎದುರಾಳಿಗಳಲ್ಲಿ ಭಯ ಹುಟ್ಟಿಸಿದೆ. ಅನುಭವಿಗಳಂತೆಯೇ ತಂಡದಲ್ಲಿ ಸಮರ್ಥ ಉದಯೋನ್ಮುಖ ತಾರೆಯರಿದ್ದಾರೆ. ಎಬಿಡಿ ಶೈಲಿಯಲ್ಲಿ ಬ್ಯಾಟ್‌ ಬೀಸಬಲ್ಲ, ಮಧ್ಯಮ ವೇಗದ ಬೌಲಿಂಗ್‌ ಮಾಡಬಲ್ಲ ಆಲ್ರೌಂಡರ್‌ ಸುಯೂಶ್‌ ಪ್ರಭುದೇಸಾಯಿ ಕಳೆದೆರಡು ವರ್ಷಗಳಿಂದ ದೇಶಿ ಕ್ರಿಕೆಟ್‌ ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಬಿಗ್‌ ಹಿಟ್ಟರ್‌ ಮಹಿಪಾಲ್‌ ಲೊಮ್ರೋರ್‌ ಗೆ ರಾಜಸ್ಥಾನ ತಂಡದಲ್ಲಿ ಫಿನಿಷರ್‌ ಸ್ಥಾನ ನಿರ್ವಹಿಸಿದ ಅನುಭವವಿದೆ. ಶಹಬಾಜ್ ಅಹ್ಮದ್‌ ಕಳೆದ ಬಾರಿ ತಂಡ ಇಟ್ಟಿದ್ದ ನಂಬಿಕೆ ಉಳಿಸಿಕೊಂಡಿದ್ದಾರೆ. ಆರಂಭಿಕ ಅನುಜ್‌ ರಾವತ್‌ ಡೆಲ್ಲಿ ಪರ ದೇಶಿ ಟೂರ್ನಿಗಳಲ್ಲಿ ಮಿಂಚು ಹರಿಸಿದ್ದಾರೆ. ಟಿ.೨೦ಯಲ್ಲಿ 190 ರ ಸ್ಟ್ರೈಕ್‌ ರೇಟ್‌ ಹೊಂದಿರುವ ನ್ಯೂಜಿಲ್ಯಾಂಡ್‌ ದಾಂಡಿಗ ಫಿನ್‌ ಆಲೆನ್ ತಂಡದಲ್ಲಿದ್ದು, ಈ ಬಾರಿ ಸಮತೋಲಿತ ತಂಡವಾಗಿ ಕಾಣುತ್ತಿದೆ.

ತಂಡದ ದೌರ್ಬಲ್ಯಗಳೇನು?
ಆರ್‌ಸಿಬಿ ತಂಡದಲ್ಲಿ ತನ್ನ ಸಾಮರ್ಥ್ಯ ಸ್ಪಿನ್ ಬೌಲಿಂಗ್‌ ಕೊರತೆ ಎದ್ದು ಕಾಣುತ್ತಿದೆ. ನಂಬಿಕಸ್ಥ ಬೌಲರ್‌ ಚಾಹಲ್ ಅವರನ್ನು ಹರಾಜಿಗೆ ಬಿಟ್ಟುಕೊಟ್ಟ ಆರ್‌ಸಿಬಿ ಸೂಕ್ತ ಸ್ಪಿನ್ನರ್‌ ಖರೀದಿಸುವಲ್ಲಿ ಎಡವಿದೆ. ತಂಡದಲ್ಲಿರುವ ಕರ್ಣ್ ಶರ್ಮಾ ಅಥವಾ ಶಹಬಾಜ್ ಅಹ್ಮದ್ ಚಹಾಲ್ ಗೆ ಸರಿಸಾಟಿಯಾಗಲಾರು. ಟ್ಯಾಲೆಂಟೆಡ್‌ ಯಂಗ್‌ ಸ್ಟಾರ್‌ ಪಡಿಕ್ಕಲ್‌ ರನ್ನು ಕೈಬಿಡುವ ಮೂಲಕ ತಂಡದಲ್ಲಿ ಮತ್ತೆ ಆರಂಭಿಕರ ಸಮಸ್ಯೆ ತಲೆದೂರಿದೆ. ವೃತ್ತಿ ಜೀವನ ಕೊನೆ ಘಟ್ಟಲ್ಲಿರುವ ದಿನೇಶ್‌ ಕಾರ್ತಿಕ್‌ ಪ್ರಾಂಚೈಸಿ ತಮ್ಮ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳುವುದು ಕಷ್ಟ. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಹಿಟ್ಟರ್‌ ಗಳಿಲ್ಲದಿರುವುದು ತಂಡಕ್ಕೆ ಕಾಡಲಿದೆ. ಅದೇನೆ ಇರಲಿ ಆಟಗಾರರು ಪ್ರಾಂಚೈಸಿ ತಮ್ಮ ಮೇಲಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸದೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಆರ್ಸಿಬಿ ಕೋಟ್ಯಾಂತರ ಅಭಿಮಾನಿಗಳು ಕಳೆದ 14 ವರ್ಷಗಳಿಂದ ನಿರೀಕ್ಷೆಯಿಟ್ಟು ಕಾಯುತ್ತಿರುವ ಕಪ್‌ ಗೆಲುವಿನ ಕನಸು ಸಾಕಾರಗೊಳ್ಳಲಿದೆ.

ಆರ್ಸಿಬಿ ಸಂಪೂರ್ಣ ತಂಡ
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಅನುಜ್ ರಾವತ್, ಶಹಬಾಜ್ ಅಹ್ಮದ್, ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್‌ಫೋರ್ಡ್ ಪ್ರಭುದೇಸಾಯಿ, ಚಾಮಾ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲುವ್ನಿತ್ ಸಿಸೋಡಿಯಾ, ಡೇವಿಡ್ ವಿಲ್ಲಿ.
ಆರ್‌ಸಿಬಿ ಕೋಚ್‌ಗಳು: ಮೈಕ್ ಹೆಸ್ಸನ್ (ಕ್ರಿಕೆಟ್ ನಿರ್ದೇಶಕ), ಸಂಜಯ್ ಬಂಗಾರ್ (ಮುಖ್ಯ ಕೋಚ್), ಶ್ರೀಧರನ್ ಶ್ರೀರಾಮ್ (ಬ್ಯಾಟಿಂಗ್ ಮತ್ತು ಸ್ಪಿನ್ ಕೋಚ್), ಆಡಮ್ ಗ್ರಿಫಿತ್ಸ್ (ಬೌಲಿಂಗ್ ಕೋಚ್), ಮಲೋಲನ್ ರಂಗರಾಜನ್ (ಫೀಲ್ಡಿಂಗ್ ಕೋಚ್).

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!