May 20, 2026
Wednesday, May 20, 2026
spot_img

ಲಕ್ನೋ ಕದನಕ್ಕೆ RCB ಸಜ್ಜು: ಫಿಲ್ ಸಾಲ್ಟ್ ಜಾಗಕ್ಕೆ ಸ್ಫೋಟಕ ದಾಂಡಿಗನ ಎಂಟ್ರಿ ಫಿಕ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ನಿರ್ಣಾಯಕ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ 50ನೇ ಪಂದ್ಯಕ್ಕೂ ಮುನ್ನ ತಂಡದ ಸ್ಫೋಟಕ ಓಪನರ್ ಫಿಲ್ ಸಾಲ್ಟ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ತಾತ್ಕಾಲಿಕವಾಗಿ ಹೊರಬಿದ್ದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಫಿಲ್ ಸಾಲ್ಟ್ ಅವರ ಎಡಗೈ ಬೆರಳಿಗೆ ಗಾಯವಾಗಿತ್ತು. ಈ ಗಾಯದ ತೀವ್ರತೆ ಹೆಚ್ಚಾದ ಕಾರಣ, ಹೆಚ್ಚಿನ ಚಿಕಿತ್ಸೆ ಮತ್ತು ಸ್ಕ್ಯಾನಿಂಗ್‌ಗಾಗಿ ಅವರು ತವರು ದೇಶವಾದ ಇಂಗ್ಲೆಂಡ್‌ಗೆ ಮರಳಿದ್ದಾರೆ. ಇಸಿಬಿ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಅವರು ಚಿಕಿತ್ಸೆ ಪಡೆಯಲಿದ್ದು, ಸಂಪೂರ್ಣ ಗುಣಮುಖರಾದ ನಂತರವಷ್ಟೇ ಐಪಿಎಲ್‌ನ ಮುಂದಿನ ಪಂದ್ಯಗಳಿಗೆ ಲಭ್ಯವಾಗಲಿದ್ದಾರೆ. ಇದು ಆರ್‌ಸಿಬಿ ತಂಡದ ಪವರ್‌ಪ್ಲೇ ಬ್ಯಾಟಿಂಗ್ ಶಕ್ತಿಗೆ ದೊಡ್ಡ ಹೊಡೆತ ನೀಡಿದೆ.

ಸಾಲ್ಟ್ ಅನುಪಸ್ಥಿತಿಯಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಯುವ ಆಟಗಾರ ಜೇಕಬ್ ಬೆಥೆಲ್ ಅವರಿಗೆ ಆರಂಭಿಕನಾಗಿ ಅವಕಾಶ ನೀಡಲಾಗಿತ್ತು. ಆದರೆ, ಬೆಥೆಲ್ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆಡಿದ 3 ಇನಿಂಗ್ಸ್‌ಗಳಲ್ಲಿ ಅವರು ಗಳಿಸಿರುವುದು ಕೇವಲ 39 ರನ್ ಮಾತ್ರ. ಪವರ್‌ಪ್ಲೇನಲ್ಲಿ ತಂಡಕ್ಕೆ ವೇಗದ ಆರಂಭ ನೀಡುವ ಬದಲು ಬೇಗನೇ ವಿಕೆಟ್ ಒಪ್ಪಿಸುತ್ತಿರುವುದು ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿದೆ.

ಬೆಥೆಲ್ ಫಾರ್ಮ್ ಕೈಕೊಡುತ್ತಿರುವ ಹಿನ್ನೆಲೆಯಲ್ಲಿ, ಲಕ್ನೋ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟರ್ ಜೋರ್ಡನ್ ಕಾಕ್ಸ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ. ಕಾಕ್ಸ್ ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ:

ಒಟ್ಟು ಪಂದ್ಯಗಳು: 165 ಇನಿಂಗ್ಸ್

ಒಟ್ಟು ರನ್: 4045

ಶತಕ/ಅರ್ಧಶತಕ: 1 ಶತಕ ಮತ್ತು 21 ಅರ್ಧಶತಕ

ಬೌಂಡರಿ/ಸಿಕ್ಸರ್: 341 ಫೋರ್ ಹಾಗೂ 161 ಸಿಕ್ಸರ್

‘ದಿ ಹಂಡ್ರೆಡ್’ ಮತ್ತು ಅಂತರಾಷ್ಟ್ರೀಯ ಟಿ20 ಲೀಗ್‌ಗಳಲ್ಲಿ ಆರಂಭಿಕನಾಗಿ ಮಿಂಚಿರುವ ಕಾಕ್ಸ್, ಆರ್‌ಸಿಬಿಗೆ ಬೇಕಾದ ಆಕ್ರಮಣಕಾರಿ ಆರಂಭ ನೀಡಬಲ್ಲರು. ಪ್ರಸಕ್ತ ಐಪಿಎಲ್‌ನಲ್ಲಿ ಕಾಕ್ಸ್ ಇನ್ನೂ ಪದಾರ್ಪಣೆ ಮಾಡಿಲ್ಲ. ಹೀಗಾಗಿ ಪ್ಲೇಆಫ್ ರೇಸ್‌ನಲ್ಲಿರುವ ಆರ್‌ಸಿಬಿ, ಎಲ್​ಎಸ್​ಜಿ ವಿರುದ್ಧ ಈ ದೊಡ್ಡ ಬದಲಾವಣೆಗೆ ಮುಂದಾಗುತ್ತದೆಯೇ ಎಂದು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !