May 11, 2026
Monday, May 11, 2026
spot_img

ರೋಚಕ ಪಂದ್ಯದಲ್ಲಿ RCB ಅಬ್ಬರ: ಮುಂಬೈ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸೂರ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್‌ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಆರ್​​ಸಿಬಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಮುಂಬೈ ತಂಡಕ್ಕೆ ಸೋಲುಣಿಸಿದೆ.

ಟಾಸ್ ಗೆದ್ದ ಬೆಂಗಳೂರು ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ನಿಗದಿತ 20 ಓವರ್‌ಗಳಲ್ಲಿ 167 ರನ್ ಗಳಿಸಿ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟುಕೊಂಡಿತು. ಈ ಗುರಿಯನ್ನು ಬೆನ್ನಟ್ಟಿದ ಆರ್​​ಸಿಬಿ, ಪಂದ್ಯದ ಅಂತಿಮ ಎಸೆತದಲ್ಲಿ ಗೆಲುವಿನ ನಗೆ ಬೀರಿದೆ.

ಸೋಲಿನ ಬಗ್ಗೆ ಪಂದ್ಯದ ನಂತರ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್, “ನಮ್ಮ ಮೊತ್ತದಲ್ಲಿ 10-15 ರನ್‌ಗಳ ಕೊರತೆಯಿತ್ತು. ನಿರ್ಣಾಯಕ ಸಮಯದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ನಮಗೆ ದೊಡ್ಡ ಹೊಡೆತ ನೀಡಿತು,” ಎಂದು ಬ್ಯಾಟಿಂಗ್ ವೈಫಲ್ಯವನ್ನು ಒಪ್ಪಿಕೊಂಡರು.

ಸೋಲಿನ ನಡುವೆಯೂ ತಂಡದ ಯುವ ಬ್ಯಾಟರ್‌ಗಳಾದ ನಮನ್ ಧೀರ್ ಮತ್ತು ತಿಲಕ್ ವರ್ಮಾ ಅವರ ಆಟವನ್ನು ಸೂರ್ಯ ಶ್ಲಾಘಿಸಿದರು. “ಪಿಚ್ ಕಠಿಣವಾಗಿದ್ದರೂ ಇವರಿಬ್ಬರು ಆಡಿದ ರೀತಿ ಅದ್ಭುತವಾಗಿತ್ತು. ಅವರು ಬೇರೆಯದೇ ಟ್ರ್ಯಾಕ್‌ನಲ್ಲಿ ಆಡುತ್ತಿದ್ದಾರೇನೋ ಎಂಬಷ್ಟು ಆತ್ಮವಿಶ್ವಾಸ ಅವರಿಗಿತ್ತು,” ಎಂದರು.

ಅಂತಿಮ ಓವರ್‌ನಲ್ಲಿ 15 ರನ್ ರಕ್ಷಿಸುವ ಸವಾಲನ್ನು ಎದುರಿಸಿದ ರಾಜ್ ಬಾವಾ ಬಗ್ಗೆ ಮಾತನಾಡಿದ ಅವರು, “ರಾಜ್ ಕಳೆದ ವರ್ಷದಿಂದ ಡೆತ್ ಓವರ್‌ಗಳಲ್ಲಿ ಉತ್ತಮ ತರಬೇತಿ ಪಡೆದಿದ್ದಾರೆ. ಅವರು ಈ ಬಾರಿ ಸಂಪೂರ್ಣ ಭಿನ್ನ ಆಟಗಾರನಾಗಿ ಕಾಣುತ್ತಿದ್ದಾರೆ. ಅವರು ನಮ್ಮನ್ನು ಗೆಲುವಿನ ಸಮೀಪಕ್ಕೆ ತಂದಿದ್ದರು, ಅವರ ಪ್ರಯತ್ನದ ಬಗ್ಗೆ ಹೆಮ್ಮೆಯಿದೆ,” ಎಂದು ಬೆನ್ನುತಟ್ಟಿದರು.

ಮುಂಬೈ ಇಂಡಿಯನ್ಸ್ ಪ್ರಸ್ತುತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಈ ಬಗ್ಗೆ ಸೂರ್ಯಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. “ಈ ಸ್ಥಾನದಲ್ಲಿ ಇರುವುದು ನಮಗೆ ಕಷ್ಟಕರವಾಗಿದೆ. ಆದರೆ ಈ ಸೀಸನ್ ನಮಗೆ ಸಾಕಷ್ಟು ಪಾಠ ಕಲಿಸಿದೆ. ಕ್ರಿಕೆಟ್ ಮೇಲಿನ ಪ್ರೀತಿಗಾಗಿ ನಾವು ಮುಂದಿನ ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತೇವೆ ಮತ್ತು ಮುಂದಿನ ವರ್ಷ ಬಲಿಷ್ಠವಾಗಿ ಮರಳುತ್ತೇವೆ,” ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !