ತಪ್ಪು ಮಾಡುವವರ ರಕ್ಷಣೆಗೆ ರಾಜ್ಯ ಸರಕಾರ ನಿಂತಿರುವುದು‌ ದುರ್ದೈವ: ಬಿ.ವೈ. ವಿಜಯೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್‌ ಅಲ್ಪಸಂಖ್ಯಾತ ತುಷ್ಟಿಕರಣ ಧೋರಣೆಯಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ಉಂಟಾಗಿದ್ದು, ಯಾರು ತಪ್ಪು ಮಾಡುತ್ತಾರೋ ಅವರ ರಕ್ಷಣೆಗೆ ಸರಕಾರ ನಿಂತಿರುವುದು‌ ದುರ್ದೈವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಎಂದೂ ಕೂಡ ಅಲ್ಪಸಂಖ್ಯಾತ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು.

ಕೇವಲ ಮತಕ್ಕೋಸ್ಕರ ಅಲ್ಪಸಂಖ್ಯಾತ ಸಮುದಾಯದ ಓಲೈಕೆಯನ್ನು ಕಾಂಗ್ರೆಸ್ ಮಾಡುತ್ತಿದೆ. ಶಾಲಾ-ಕಾಲೇಜಿಗೆ ಹೋಗುವ ಹೆಣ್ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುತ್ತಾಳಾ ಎಂಬ ಆತಂಕ ಎದುರಾಗಿದೆ. ನರೇಂದ್ರ ಮೋದಿ ಪರ ಹಾಡು ಬರೆದಾತನ ಮೇಲೆ ಹಲ್ಲೆಯಾಗಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬಿಜೆಪಿ ಕಾರ್ಯಕರ್ತರಿಗಷ್ಟೇ ಅಲ್ಲ, ಜನರೂ ಭಯದಿಂದ ನರಳುತ್ತಿದ್ದಾರೆ ಎಂದರು.

ಪ್ರಧಾನಮಂತ್ರಿ ಹತ್ತು ವರ್ಷಗಳ ನಂತರವೂ ಜನಪ್ರಿಯತೆ ದುಪ್ಪಟ್ಟು ಗಳಿಸಿಕೊಂಡಿದ್ದಾರೆ ಎಂಬುದಕ್ಕೆ ನುಡಿದಂತೆ ನಡೆದ ಅವರ ಧೋರಣೆ, ಕೆಲಸ ಕಾರ್ಯಗಳು ಕಾರಣ ಎಂದ ವಿಜಯೇಂದ್ರ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳು 28 ಸ್ಥಾನಗಳಲ್ಲು ಗೆಲುವು ನಿಶ್ಚಿತ,ದ.ಕ.ಜಿಲ್ಲಾ ಬಿಜೆಪಿ ಅಬವ್ಯರ್ಥಿ ಬ್ರಿಜೇಶ್ ಚೌಟ ಅವರು 3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ತಂದೆಯವರಾದ ಬಿಎಸ್ ಯಡಿಯೂರಪ್ಪ ಮತ್ತು ದ.ಕ.ಜಿಲ್ಲೆಯೊಂದಿಗಿನ ಅವಿನಾಭಾವ ಸಂಬಂಧವನ್ನು ಮೆಲುಕು‌ಹಾಕಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ದೇವದುರ್ಲಭ ಕಾರ್ಯಕರ್ತರಲ್ಲಿ ಹಿಂದುತ್ವದ ರಕ್ತ ಕಣಕಣದಲ್ಲೂ ಹರಿಯುತ್ತಿದೆ ಎಂದವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!