Sunday, December 3, 2023

Latest Posts

ಶವ ಸಂಸ್ಕಾರಕ್ಕೆ ನೀಡುತ್ತಿದ್ದ ಸಹಾಯಧನ ಮರು ಜಾರಿಗೊಳಿಸಿ: ಮೇಘರಾಜ್ ಒತ್ತಾಯ

ಹೊಸ ದಿಗಂತ ವರದಿ, ಶಿವಮೊಗ್ಗ:

ಬಡ ಕುಟುಂಬದ ಸದಸ್ಯರು ಮರಣ ಹೊಂದಿದಾಗ ಶವ ಸಂಸ್ಕಾರಕ್ಕಾಗಿ ನೀಡುತ್ತಿದ್ದ 5 ಸಾವಿರ ರೂ. ಸಹಾಯ ಧನ ಯೋಜನೆ ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರ ಕೂಡಲೇ ಇದನ್ನು ಮರು ಜಾರಿಗೊಳಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟಿನ ಅಧ್ಯಕ್ಷ ಕಲ್ಲೂರು ಮೇಘರಾಜ್ ಒತ್ತಾಯಿಸಿದ್ದಾರೆ.

ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2021-22ರಿಂದ ಈ ಯೋಜನೆ ಸ್ಥಗಿತಗೊಂಡಿದೆ. 2006ರಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು. ಆಗ ಒಂದು ಸಾವಿರ ರೂ.ಗಳನ್ನು ನೀಡಲಾಗುತ್ತಿತ್ತು. ನಂತರ 2015ರಲ್ಲಿ 5 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಇದರಿಂದ ಬಡ ಹಾಗೂ ದುಃಖತಪ್ತ ಕುಟುಂಬಗಳಿಗೆ ಒಂದು ರೀತಿಯ ಸಂಜೀವಿನಿಯಾಗುತ್ತಿತ್ತು. ಆದರೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ 2021ರ ಆಗಸ್ಟ್‌ ಅಂತ್ಯಕ್ಕೆ ಅನ್ವಯವಾಗುವಂತೆ ಯೋಜನೆ ಸ್ಥಗಿತಗೊಳಿಸಿತ್ತು. ಈಗಿನ ಸರ್ಕಾರ ಕೂಡ ಅದನ್ನು ಮುಂದುವರೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆ ಸ್ಥಗಿತದಿಂದ ಬಡವರಿಗೆ ಕಷ್ಟವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಬಡಜನರು ಅಂತ್ಯ ಸಂಸ್ಕಾರ, ತಿಥಿ ಕಾರ್ಯಗಳಿಗೆ ಸಾಲ ಪಡೆಯುವಂತಾಗಿದೆ. ರಾಜ್ಯ ಸರ್ಕಾರ ಈ ಯೋಜನೆಯನ್ನು ಪುನರಾರಂಭಿಸುವ ಜೊತೆಗೆ ಈ ಹಿಂದೆ ನೀಡುತ್ತಿದ್ದ 5 ಸಾವಿರದ ಜೊತೆಗೆ ಮತ್ತೆ 5 ಸಾವಿರ ಸೇರಿಸಿ 10 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!