ಸಿಗರೇಟ್ ಅಥವಾ ಬೀಡಿ ಸೇದೋ ಅಭ್ಯಾಸ ಇದ್ದವರು “ಇಷ್ಟೊಂದು ವರುಷ ಸೇದಿದ್ದೀನಿ, ಈಗ ಬಿಟ್ಟರೆ ಏನು ಪ್ರಯೋಜನ? ಈಗಾಗಲೇ ಆಗಬೇಕಿರೋ ಹಾನಿ ಆಗೋಗಿದೆಯಲ್ಲ ಎಂದು ಅಂದುಕೊಳ್ಳುವುದು ಸಾಮಾನ್ಯ. ಆದರೆ ವೈದ್ಯಕೀಯ ವಿಜ್ಞಾನ ಹೇಳೋದೇ ಬೇರೆ. ನೀವು ಸಿಗರೇಟ್ ಸೇದೋದನ್ನು ನಿಲ್ಲಿಸಿದ ಕ್ಷಣದಿಂದಲೇ ನಿಮ್ಮ ಶ್ವಾಸಕೋಶ ತನ್ನನ್ನು ತಾನು ರಿಪೇರಿ ಮಾಡಿಕೊಳ್ಳಲು ಶುರು ಮಾಡುತ್ತದೆ. ಹಾಗಾದರೆ ಧೂಮಪಾನ ಬಿಟ್ಟ ಮೇಲೆ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೇಗೆ ಮತ್ತು ಎಷ್ಟು ಕಮ್ಮಿಯಾಗುತ್ತದೆ ಗೊತ್ತಾ?

ದೇಹದಲ್ಲಿ ಏನೇನಾಗುತ್ತೆ?
ಧೂಮಪಾನ ನಿಲ್ಲಿಸಿದ ಕೆಲವೇ ದಿನಗಳಲ್ಲಿ ಶ್ವಾಸಕೋಶ ತನ್ನನ್ನು ತಾನು ಸ್ವಚ್ಛಗೊಳಿಸಲು ಶುರು ಮಾಡುತ್ತದೆ. ಶ್ವಾಸಕೋಶದಲ್ಲಿ ‘ಸಿಲಿಯಾ’ ಎನ್ನುವ ಸಣ್ಣ ಕೂದಲುಗಳಂತಹ ಜೀವಕೋಶಗಳಿರುತ್ತವೆ. ಸಿಗರೇಟ್ ಹೊಗೆಯಿಂದ ಇವು ಮರಗಟ್ಟಿ ಕೆಲಸ ಮಾಡುವುದನ್ನು ನಿಲ್ಲಿಸಿರುತ್ತವೆ. ನೀವು ಸಿಗರೇಟ್ ಬಿಟ್ಟ ತಕ್ಷಣ ಈ ಸಿಲಿಯಾಗಳು ಮತ್ತೆ ಜೀವ ಪಡೆದುಕೊಂಡು, ಶ್ವಾಸಕೋಶದಲ್ಲಿದ್ದ ಕಫ, ಧೂಳು ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಹೊರಹಾಕಲು ಶುರು ಮಾಡುತ್ತವೆ.
ಕೆಲವೇ ತಿಂಗಳುಗಳಲ್ಲಿ ಕೆಮ್ಮು, ಸಿಗರೇಟ್‌ನಿಂದ ಬರುವ ಆಯಾಸ ಮತ್ತು ಉಸಿರಾಟದ ತೊಂದರೆ ಕಮ್ಮಿಯಾಗುತ್ತಾ ಬರುತ್ತದೆ. ಶ್ವಾಸಕೋಶದ ಗಾಳಿ ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ದೇಹದ ಪ್ರತಿ ಭಾಗಕ್ಕೂ ಶುದ್ಧ ಆಮ್ಲಜನಕ ಪೂರೈಕೆಯಾಗಲು ಶುರುವಾಗುತ್ತದೆ.

ನೀವು ಧೂಮಪಾನ ಬಿಟ್ಟು 10 ವರುಷ ತಲುಪುವಷ್ಟರಲ್ಲಿ, ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾವು ಸಂಭವಿಸುವ ಅಪಾಯವು, ಇನ್ನೂ ಸಿಗರೇಟ್ ಕುಡಿಯುತ್ತಿರುವ ವ್ಯಕ್ತಿಗೆ ಹೋಲಿಸಿದರೆ ಬರೋಬ್ಬರಿ ಶೇಕಡಾ 50 ರಷ್ಟು ಕಮ್ಮಿಯಾಗುತ್ತದೆ. ಇದರ ಜೊತೆಗೆ ಗಂಟಲು, ಬಾಯಿ, ಮೂತ್ರಕೋಶ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಬರುವ ಅಪಾಯವೂ ಗಣನೀಯವಾಗಿ ಇಳಿಕೆಯಾಗುತ್ತದೆ.
15 ರಿಂದ 20ವರುಷಗಳ ಕಾಲ ಧೂಮಪಾನದಿಂದ ದೂರವಿದ್ದರೆ, ನಿಮ್ಮ ಶ್ವಾಸಕೋಶದ ಕ್ಯಾನ್ಸರ್ ಅಪಾಯವು ಜೀವನದಲ್ಲಿ ಎಂದಿಗೂ ಸಿಗರೇಟ್ ಮುಟ್ಟದೇ ಇರುವ ಸಾಮಾನ್ಯ ವ್ಯಕ್ತಿಯ ಮಟ್ಟಕ್ಕೆ ತಲುಪುತ್ತದೆ. ಧೂಮಪಾನದಿಂದ ಹಾನಿಗೊಳಗಾಗಿದ್ದ ಶ್ವಾಸಕೋಶದ ಜೀವಕೋಶಗಳ ಜಾಗದಲ್ಲಿ ಹೊಸ, ಆರೋಗ್ಯಕರ ಜೀವಕೋಶಗಳು ಬೆಳೆದಿರುತ್ತವೆ.

ಯಾವ ವಯಸ್ಸಿನಲ್ಲಿ ಸಿಗರೇಟ್ ಬಿಟ್ಟರೂ ಲಾಭ ಖಂಡಿತ. 30ನೇ ವಯಸ್ಸಿನಲ್ಲಿ ಬಿಟ್ಟರೆ ಆಯುಷ್ಯ ಇನ್ನು 10 ವರುಷ ಹೆಚ್ಚಾಗಬಹುದು, 50ನೇ ವಯಸ್ಸಿನಲ್ಲಿ ಬಿಟ್ಟರೂ ಕ್ಯಾನ್ಸರ್ ಅಪಾಯ ಅರ್ಧಕ್ಕರ್ಧ ಕಮ್ಮಿಯಾಗುತ್ತದೆ. ಆದ್ದರಿಂದ “ಈಗ ಲೇಟ್ ಆಯ್ತು” ಅನ್ನೋ ಮಾತಿಗೇ ಜಾಗವಿಲ್ಲ. ಸಿಗರೇಟ್‌ಗೆ ಬೈ-ಬೈ ಹೇಳಿ, ನಿರಾಳವಾಗಿ ಉಸಿರಾಡಿ.



