Saturday, March 25, 2023

Latest Posts

ರಿಯಲ್ ಟೈಮ್ ಟ್ರ್ಯಾಕಿಂಗ್: ರೈಲ್ವೆಗೆ ಸಾಥ್ ನೀಡಲಿದೆ ಇಸ್ರೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರೈಲುಗಳ ನೈಜ ಸಮಯದ ಟ್ರ್ಯಾಕಿಂಗ್‌ ಮಾಡಲು ಭಾರತೀಯ ರೈಲ್ವೆಯು ದತ್ತಾಂಶ ವಿಶ್ಲೇಷಣೆ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಯೋಜಿಸಿದೆ. ರಿಯಲ್ ಟೈಮ್ ಟ್ರೈನ್ ಇನ್ಫಾರ್ಮೇಶನ್ ಸಿಸ್ಟಮ್ (ಆರ್‌ಟಿಐಎಸ್) ಎಂಬ ಹೆಸರಿನ ಈ ಯೋಜನೆಯ ಅಡಿಯಲ್ಲಿ ಉಪಗ್ರಹ ಚಿತ್ರಣದ ಸಹಾಯದಿಂದ ರೈಲು ಗಳನ್ನು ನೈಜಸಮಯದಲ್ಲಿ ಟ್ರ್ಯಾಕಿಂಗ್‌ ಮಾಡಲಿದೆ. ಈ ಕುರಿತು ಉಪಗ್ರಹ ವ್ಯವಸ್ಥೆಯ ಬೆಂಬಲ ಪಡೆಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರದ (CRIS) ವ್ಯವಸ್ಥಾಪಕ ಡಿ.ಕೆ.ಸಿಂಗ್‌ ಹೇಳಿದ್ದಾರೆ.

ISRO ತನ್ನದೇ ಆದ ಪ್ರಾದೇಶಿಕ ನ್ಯಾವಿಗೇಶನ್ ಉಪಗ್ರಹ ವ್ಯವಸ್ಥೆ ʼನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್‌ಸ್ಟೆಲೇಷನ್ (NavIC)ʼ ಮತ್ತು ಭುವನ್ ಅನ್ನು ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಗಳ ಸಂಯೋಜನೆಯ ಮೂಲಕ ಕಾರ್ಯನಿರ್ವಹಿಸುವ ಡಿವೈಸ್‌ ಗಳನ್ನು ಪ್ರತಿ ಲೊಕೋಮೋಟಿವ್‌ ಇಂಜಿನ್‌ ಗಳಿಗೆ ಲಗತ್ತಿಸಲಾಗುತ್ತದೆ. ಈ ಡಿವೈಸ್‌ ಗಳು ರೈಲಿನ ನೈಜ ಸ್ಥಾನವನ್ನು ಉಪಗ್ರಹಕ್ಕೆ ತಿಳಿಸಲಿವೆ. ಉಪಗ್ರಹಗಳಿಂದ ರೈಲ್ವೆ ಮಾಹಿತಿ ಕೇಂದ್ರಕ್ಕೆ ಮಾಹಿತಿ ರವಾನೆಯಾಗಲಿದೆ. ಆಮೂಲಕ ನೈಜ ಸಮಯದ ಟ್ರ್ಯಾಕಿಂಗ್‌ ನಡೆಸಲು ಚಿಂತಿಸಲಾಗಿದೆ. ಇದು ಪ್ರತಿ ಮೂರು ಸೆಕೆಂಡಿಗೊಮ್ಮೆ ತನ್ನ ಮಾಹಿತಿಯನ್ನು ನವೀಕರಿಸಲಿದೆ.

ಅಪಘಾತಗಳು, ಪ್ರವಾಹಗಳು ಮತ್ತು ಭೂಕುಸಿತಗಳ ಸಮಯದಲ್ಲಿ ರೈಲುಗಳ ರಿಯಲ್‌ ಟೈಮ್‌ ಟ್ರ್ಯಾಕಿಂಗ್‌ ಬಹಳ ಉಪಯುಕ್ತವಾಗಲಿದೆ. “ಇಲ್ಲಿಯವರೆಗೆ, 4,000 ಲೊಕೊಮೊಟಿವ್‌ಗಳಲ್ಲಿ ತಂತ್ರಜ್ಞಾನವನ್ನು ಸ್ಥಾಪಿಸಲಾಗಿದೆ ಮತ್ತು ಹೊಸದಾಗಿ ತಯಾರಾಗುತ್ತಿರುವ ಇಂಜಿನ್‌ಗಳೂ ಕೂಡ ಟ್ರ್ಯಾಕಿಂಗ್‌ ಸಾಧನಗಳು ಅಳವಡಿಕೆಯಾಗಿಯೇ ಬರಲಿವೆ” ಎಂದು ಸಿಂಗ್‌ ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!