ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಭಾರತೀಯ ಚಿತ್ರರಂಗದ ಅತಿದೊಡ್ಡ ‘ಪ್ಯಾನ್ ಇಂಡಿಯಾ’ ಸ್ಟಾರ್ ಎಂದರೆ ಅದು ಪ್ರಭಾಸ್. ‘ಬಾಹುಬಲಿ’ ಚಿತ್ರದ ನಂತರ ಅವರ ಖ್ಯಾತಿ ಜಾಗತಿಕ ಮಟ್ಟಕ್ಕೆ ಬೆಳೆಯಿತು ಎಂಬುದು ನಿಜ. ಆದರೆ, ಈ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಪ್ರಭಾಸ್ ಕ್ರೇಜ್ ಬಾಲಿವುಡ್‌ನ ಹೃದಯಭಾಗವಾದ ಮುಂಬೈನಲ್ಲಿ ಹೇಗಿತ್ತು ಎಂಬುದನ್ನು ಖ್ಯಾತ ನಿರ್ಮಾಪಕ ಕರಣ್ ಜೋಹರ್ ವಿವರಿಸಿದ್ದಾರೆ.
ಬಾಹುಬಲಿ ಸಿನಿಮಾದ ವಿತರಣೆಯ ಜವಾಬ್ದಾರಿ ಹೊತ್ತಿದ್ದ ಕರಣ್ ಜೋಹರ್, ಪ್ರಭಾಸ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
“ನನ್ನ ಕಚೇರಿಗೆ ಸ್ಟಾರ್ ನಟ-ನಟಿಯರು ಬರುವುದು ಹೊಸದೇನಲ್ಲ. ಆದರೆ ಅಂದು ಪ್ರಭಾಸ್ ಬಂದಾಗ ಅಲ್ಲಿ ಉಂಟಾದ ಸಂಚಲನ ಕಂಡು ನಾನು ಶಾಕ್ ಆಗಿದ್ದೆ. ಕಚೇರಿಯ ಲಾಬಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಅಭಿಮಾನಿಗಳು ನುಗ್ಗಿದ್ದರು. ಹೊರಗಡೆ ಸಾವಿರಾರು ಜನರು ‘ಪ್ರಭಾಸ್.. ಪ್ರಭಾಸ್..’ ಎಂದು ಘೋಷಣೆ ಕೂಗುತ್ತಿದ್ದರು,” ಎಂದು ಕರಣ್ ಹೇಳಿದ್ದಾರೆ.
ಬಾಹುಬಲಿಗೂ ಮುನ್ನ ಪ್ರಭಾಸ್ ಅವರಿಗೆ ಉತ್ತರ ಭಾರತದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅಭಿಮಾನಿ ಬಳಗ ಸೃಷ್ಟಿಯಾಗಲು ಕಾರಣ ಟಿವಿ ಡಬ್ಬಿಂಗ್ ಸಿನಿಮಾಗಳು. ಪ್ರಭಾಸ್ ನಟನೆಯ ತೆಲುಗು ಚಿತ್ರಗಳು ಹಿಂದಿಗೆ ಡಬ್ ಆಗಿ ಸೋನಿ ಮ್ಯಾಕ್ಸ್‌ನಂತಹ ಚಾನೆಲ್‌ಗಳಲ್ಲಿ ಸತತವಾಗಿ ಪ್ರಸಾರವಾಗುತ್ತಿದ್ದವು. ಇದನ್ನು ಗಮನಿಸಿದ ಕರಣ್ ಜೋಹರ್ ಅವರಿಗೆ ಪ್ರಭಾಸ್ ಎಂಬ ನಟನ ಮಾರುಕಟ್ಟೆ ಮೌಲ್ಯ ಮತ್ತು ಡಬ್ಬಿಂಗ್ ಸಿನಿಮಾಗಳ ತಾಕತ್ತು ಅಂದು ಅರ್ಥವಾಯಿತು ಎಂದಿದ್ದಾರೆ.



