ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ 10 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಿದ್ಧತೆ ನಡೆದಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ ಕೂಡಲೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ಪಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ತಳವಾರ್ ಸಾಬಣ್ಣ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷರ ಕೊರತೆ ಇದೆ. ಶಿಕ್ಷಕರಿಲ್ಲದ ಕಾರಣ ಪ್ರತಿ ಬಾರಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಹಿಂದೆ ಬೀಳುತ್ತಿದೆ. ಈ ಭಾಗದಲ್ಲಿ 19 ಸಾವಿರ ಶಿಕ್ಷಕರ ಕೊರತೆ ಇದ್ದು, ಶಾಲಾ ಕೊಠಡಿಗಳ ಸಮಸ್ಯೆ ಇದೆ. ಕೂಡಲೇ ಶಿಕ್ಷಕರ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಸಚಿವ ಮಧು ಬಂಗಾರಪ್ಪ ಉತ್ತರ ನೀಡಿ, ಶಿಕ್ಷಣ ಇಲಾಖೆಯಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ. 10 ಸಾವಿರ ಶಿಕ್ಷಕರ ನೇಮಕಕ್ಕೆ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಆರ್ಥಿಕ ಇಲಾಖೆ ಅನುಮತಿ ಕೊಟ್ಟ ಬಳಿಕ 10 ಸಾವಿರ ಹುದ್ದೆ ನೇಮಕ ಪ್ರಕ್ರಿಯೆ ಶುರು ಮಾಡುತ್ತೇವೆ. 10 ಸಾವಿರ ಹುದ್ದೆಗಳ ಪೈಕಿ 6,500 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡಲಾಗುತ್ತದೆ. ಸದ್ಯ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದ್ದು, ಆರ್ಥಿಕ ಇಲಾಖೆ ಅನುಮತಿ ಕೊಟ್ಟ ಬಳಿಕ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.
ಈ ವೇಳೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ 6500 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಆಗಿದೆ. ಕಲ್ಯಾಣ ಕರ್ನಾಟಕ ಭಾಗದ ಹುದ್ದೆ ತುಂಬಲು ಆರ್ಥಿಕ ಇಲಾಖೆ ಅನುಮತಿ ಬೇಕಿಲ್ಲ ಅನ್ನೋ ನಿಯಮ ಇದೆ. ಹೀಗಾಗಿ ಶಿಕ್ಷಕರ ನೇಮಕಕ್ಕೆ ಪ್ರಕ್ರಿಯೆ ಶುರುವಾಗಿದೆ. ಆದಷ್ಟು ಬೇಗ ನೇಮಕ ಪ್ರಕ್ರಿಯೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.