September 16, 2026
Wednesday, September 16, 2026
spot_img

ಹಳೆಯ ಮಹಿಳಾ ಮೀಸಲಾತಿ ಮಸೂದೆಯನ್ನು ಮತ್ತೆ ಮಂಡಿಸಿ: ಪ್ರಿಯಾಂಕಾ ಗಾಂಧಿ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರವಾಗದೆ ವಿಫಲವಾದ ಹಿನ್ನೆಲೆಯಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಈ ನಡುವೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಹಳೆಯ ಮಹಿಳಾ ಮೀಸಲಾತಿ ಮಸೂದೆಯನ್ನು ಮತ್ತೆ ಮಂಡಿಸುವಂತೆ ಒತ್ತಾಯಿಸಿದ್ದಾರೆ.

ವಿಶೇಷ ಸಂಸತ್ ಅಧಿವೇಶನದ ಕೊನೆಯ ದಿನ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಎಲ್ಲಾ ಪಕ್ಷಗಳ ಒಮ್ಮತದಿಂದ ಅಂಗೀಕರಿಸಲ್ಪಟ್ಟ ಮಸೂದೆಯನ್ನು ಪುನಃ ತರಲು ಸರ್ಕಾರ ಮುಂದಾಗಬೇಕು ಎಂದು ಹೇಳಿದ್ದಾರೆ. ಸೋಮವಾರವೇ ಸಂಸತ್ ಅಧಿವೇಶನ ಕರೆದು ಆ ಮಸೂದೆಯನ್ನು ಮಂಡಿಸಿದರೆ, ಯಾರು ಮಹಿಳಾ ಪರ ಮತ್ತು ಯಾರು ವಿರೋಧಿಗಳು ಎಂಬುದು ಸ್ಪಷ್ಟವಾಗುತ್ತದೆ ಎಂದು ಸವಾಲು ಹಾಕಿದರು.

ಇದನ್ನೂ ಓದಿ:

ಹಳೆಯ ಮಸೂದೆ ಮಂಡಿಸಿದರೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಮತ್ತು ಅದರ ಪರವಾಗಿ ಮತ ಚಲಾಯಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು. ಈ ಮೂಲಕ ಮಹಿಳಾ ಮೀಸಲಾತಿ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಿಲುವು ಬಹಿರಂಗವಾಗಬೇಕು ಎಂಬುದನ್ನು ಅವರು ಒತ್ತಿಹೇಳಿದರು.

ಇನ್ನೊಂದೆಡೆ, ಮಹಿಳಾ ಮೀಸಲು ಮಸೂದೆ ಅಂಗೀಕಾರಕ್ಕೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತವನ್ನು ಸರ್ಕಾರ ಸಾಧಿಸಲು ವಿಫಲವಾಯಿತು. ಮತದಾನದಲ್ಲಿ 298 ಮಂದಿ ಪರವಾಗಿ ಮತ ಚಲಾಯಿಸಿದರೆ, 230 ಮಂದಿ ವಿರೋಧ ವ್ಯಕ್ತಪಡಿಸಿದರು.

ಈ ಬೆಳವಣಿಗೆಯ ಬಳಿಕ ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ರಾಜಕೀಯವಾಗಿ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !