ಗಣಿಗಾರಿಕೆ ಪ್ರಸ್ತಾಪ ತಿರಸ್ಕರಿಸಿ ಕಪ್ಪತ್ತಗುಡ್ಡ ಕಾಪಾಡಿ: ರಾಜ್ಯ ಸರ್ಕಾರಕ್ಕೆ ಹೊರಟ್ಟಿ ಮನವಿ

ಹೊಸದಿಗಂತ ವರದಿ, ಹುಬ್ಬಳ್ಳಿ:
ಗದುಗಿನ ಕಪ್ಪತ್ತಗುಡ್ಡಕ್ಕೆ ಗಣಿಧಣಿಗಳ ಕಣ್ಣು ಬಿದ್ದಿರುವುದರಿಂದ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಿಸಿಕೊಳ್ಳುವ ಕಪ್ಪತ್ತಗುಡ್ಡಕ್ಕೆ ಮತ್ತೆ ಕಂಟಕ ಎದುರಾಗಿದೆ. ಕಪ್ಪತ್ತಗುಡ್ಡ ಸಂರಕ್ಷಿಸಲು ಹಾಗೂ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ಯಾವುದೇ ತ್ಯಾಗಕ್ಕಾದರೂ ಸಿದ್ಧರಾಗಿ ದಿಟ್ಟ ಕ್ರಮ ಕೈಗೊಳ್ಳುವ ಮೂಲಕ ಕಪ್ಪತ್ತಗುಡ್ಡ ಸಂರಕ್ಷಿಸಲು ಮುಂದಾಗಬೇಕೆಂದು ಮುಖ್ಯಮಂತ್ರಿಗಳಿಗೆ ವಿಧಾನಪರಿಷತ್ತಿನ ನಿಕಟಪೂರ್ವ ಸಭಾಪತಿಗಳು ಹಾಗೂ ಮೇಲ್ಮನೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯವರು ಒತ್ತಾಯಿಸಿ ಪತ್ರ ಬರೆದಿದ್ದಾರೆ.
ಗಣಿ ಧಣಿಗಳ ಕೆಟ್ಟ ಕಣ್ಣು ಕಪ್ಪತ್ತಗುಡ್ಡದ ಮೇಲೆ ಮತ್ತೆ ಬೀಳುವ ಮೂಲಕ ಗಣಿಗಾರಿಕೆ ನಡೆಸಲು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ಆಸೆ ಆಮಿಷಗಳಿಗೆ ಬಲಿಯಾಗದೇ ಸರ್ಕಾರವು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು. ಅದರ ಜೊತೆಗೆ ಕಪ್ಪತ್ತಗುಡ್ಡವನ್ನು ರಕ್ಷಿಸಲು ವಿಶೇಷವಾದ ಅಭಿವೃದ್ಧಿಗೆ ಪೂರಕವಾದಂತಹ ಯೋಜನೆಗಳನ್ನು ಸಹ ಸರಕಾರ ರೂಪಿಸಬೇಕು. ಪ್ರತಿವರ್ಷ ಕಾಡಿಗೆ ಬೆಂಕಿ ಬೀಳುತ್ತದೆ. ಪ್ರತಿಸಲವು ಕಾಡನ್ನು ಬೆಂಕಿಯಿಂದ ರಕ್ಷಿಸಲಾಗುತ್ತದೆ. ಅದೇ ರೀತಿ ಕಪ್ಪತ್ತಗುಡ್ಡವನ್ನು ಗಣಿಗಾರಿಕೆಯಿಂದ ರಕ್ಷಣೆ ಮಾಡಬೇಕು ಎಂದಿದ್ದಾರೆ.
ಅಪಾರ ನೈಸರ್ಗಿಕ ಸಂಪನ್ಮೂಲಗಳನ್ನು ಸಾವಿರಾರು ಔಷಧಿಯ ಗಿಡಮೂಲಿಕೆಯನ್ನು ಹೊಂದಿರುವ ಕಪ್ತತ್ತಗುಡ್ಡ ದೇಶದಲ್ಲಿಯೇ ನೈಸರ್ಗಿಕ ಸಂಪನ್ಮೂಲಗಳ ವೈಶಿಷ್ಟತೆಗೆ ಕಾರಣವಾಗಿದೆ. ಇಂತಹ ಕಪ್ಪತ್ತಗುಡ್ಡಕ್ಕೆ ಕಳ್ಳ ಕಾಕರು ಹಾಗೂ ಗಣಿಮಾಫಿಯಾದವರ ಕಾಕದೃಷ್ಟಿ ಬಿದ್ದಿದೆ. ಇದಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ.
ಕಪ್ಪತ್ತಗುಡ್ಡವನ್ನು ಪಶ್ಚಿಮ ಘಟ್ಟಗಳ ಸೆರಗು ಎನ್ನುಲಾಗುತ್ತಿದೆ. ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ರೀತಿಯಲ್ಲಿ ಕಪ್ಪತ್ತಗುಡ್ಡವನ್ನು ಸಹ ಸಂರಕ್ಷಿಸುವ ಕೆಲಸವಾಗಬೇಕು. ಕಪ್ಪತ್ತಗುಡ್ಡದ ಅರಣ್ಯ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೀಜ ಊರುವ ಕಾರ್ಯಕ್ರಮ ಮತ್ತು ಸಂರಕ್ಷಣಾ ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಕರ್ನಾಟಕ ಸರ್ಕಾರ ಹಾಕಿಕೊಳ್ಳಬೇಕು. ಜೊತೆಗೆ ಅಮೂಲ್ಯ ಸಸ್ಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸುವ ದೊಡ್ಡ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲದಾಗಿದೆ ಎಂದು ಬರೆದಿದ್ದಾರೆ.
ಸರ್ಕಾರವು ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಿಸಿ 2019ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಸರ್ಕಾರದ ಘೋಷಣೆಯ ಅನುಸಾರ ಹಾಗೂ ಸುಪ್ರೀಂ ಕೋರ್ಟ ಆದೇಶದ ಪ್ರಕಾರ ವನ್ಯಜೀವಿಧಾಮದ ಹತ್ತು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶವಿಲ್ಲ. ಆ ಪ್ರದೇಶದ ಪ್ರಕಾರ 10 ಕಿ.ಮೀ ಒಳಗಿನ ಜಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದೇ ಅರ್ಥೈಸಲಾಗಿದೆ. ವಸ್ತು ಸ್ಥಿತಿ ಹೀಗಿದ್ದರೂ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು 1 ಕಿ.ಮೀ ಮಿತಗೊಳಿಸಲು ರಾಜ್ಯಸರ್ಕಾರ ಕೈಗೊಂಡ ತೀರ್ಮಾನದಿಂದ ಸುಪ್ರೀಂಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಂತಾಗುತ್ತದೆ. ಅಲ್ಲದೇ ಪರಿಸರದ ಮೇಲಾಗುವ ಪರಿಣಾಮಗಳನ್ನು ಕಡೆಗಣಿಸಿದಂತಾಗುತ್ತದೆ.
ಪರಿಸರದ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶಕೊಟ್ಟರೆ ವನ್ಯಜೀವಿ ಧಾಮದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳೇ ಹೇಳಿರುವುದು ಹಾಸ್ಯಾಸ್ಪದ. ಯಾವುದೇ ಕಾರಣಕ್ಕೂ ಅಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಕಪ್ಪತ್ತಗುಡ್ಡ ಪರಿಸರ ಎಲ್ಲ ಜನರ ಒತ್ತಾಸೆ ಹಾಗೂ ಅಭಿಪ್ರಾಯವಾಗಿದೆ. ಈ ವಿಷಯವಾಗಿ ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ತಾವು ದಿಟ್ಟ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಕಪ್ಪತ್ತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದರಿಂದ ವಾಯು ಮತ್ತು ಜಲಮಾಲಿನ್ಯ ಉಂಟಾಗುತ್ತದೆ. ಮೊದಲೇ ಗಣಿಗಾರಿಕೆಗೆ ಸಲ್ಲಿಸಿದ ಪ್ರಸ್ತಾವನೆಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿ
ಕಪ್ಪತ್ತಗುಡ್ಡ ಸಂರಕ್ಷಣೆಗೆ ವಿಶೇಷ ಕಾರ್ಯಪಡೆ ರಚಿಸಲು ಮುಖ್ಯಮಂತ್ರಿಗಳಿಗೆ ಬಸವರಾಜ ಹೊರಟ್ಟಿ ಅವರು ಒತ್ತಾಯಿಸಿದ್ದಾರೆ.
ಗದುಗಿನ ಕಪ್ಪತ್ತಗುಡ್ಡಕ್ಕೆ ಗಣಿಧಣಿಗಳ ಕಣ್ಣು ಬಿದ್ದಿರುವುದರಿಂದ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಿಸಿಕೊಳ್ಳುವ ಕಪ್ಪತ್ತಗುಡ್ಡಕ್ಕೆ ಮತ್ತೆ ಕಂಟಕ ಎದುರಾಗಿದೆ. ಕಪ್ಪತ್ತಗುಡ್ಡ ಸಂರಕ್ಷಿಸಲು ಹಾಗೂ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ಯಾವುದೇ ತ್ಯಾಗಕ್ಕಾದರೂ ಸಿದ್ಧರಾಗಿ ದಿಟ್ಟ ಕ್ರಮ ಕೈಗೊಳ್ಳುವ ಮೂಲಕ ಕಪ್ಪತ್ತಗುಡ್ಡ ಸಂರಕ್ಷಿಸಲು ಮುಂದಾಗಬೇಕೆಂದು ಸಿಎಂ ಗೆ ಒತ್ತಾಯಿಸಿ ಹೊರಟ್ಟಿಯವರು ಪತ್ರ ಬರೆದಿದ್ದಾರೆಂದು ಡಾ.ಬಸವರಾಜ ಧಾರವಾಡ ತಿಳಿಸಿದ್ದಾರೆ.
ಕಪ್ಪತ್ತಗುಡ್ಡದ ಸಂರಕ್ಷಣೆಗೆ ವಿಶೇಷ ಕಾರ್ಯಪಡೆ ರಚಿಸುವ ಅವಶ್ಯಕತೆಯ ಕೂಗು ಹಲವಾರು ವರ್ಷಗಳಿಂದ ಇದೆ. ತಾವು ಸಹ ಇದೇ ಭಾಗದವರು ಆಗಿರುವುದರಿಂದ ಕಪ್ಪತ್ತಗುಡ್ಡದ ಬಗ್ಗೆ ತಮಗೆ ಅಪಾರ ಮಾಹಿತಿ ಇದೆ. ಮುಂದಿನ ಪೀಳಿಗೆಗೆ ಇಂತಹ ನಿಸರ್ಗ ಸಂಪತ್ತನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರದ್ದಾಗಿದೆ. ಕೆಲವೇ ಕೆಲವು ಮಂದಿ ಉಳ್ಳವರ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸಕ್ಕಾಗಿ ತಾವು ಮತ್ತು ಸರಕಾರ ಸಹಕರಿಸದೇ ಈ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕಪ್ಪತ್ತಗುಡ್ಡವನ್ನು ಎಂದಿನಂತೆ ಉಳಿಸಬೇಕೆಂಬುದೇ ನನ್ನ ಅಭಿಪ್ರಾಯ ಹಾಗೂ ಒತ್ತಾಯ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!