ಬಾಬು ಕುಡ್ತಡ್ಕ ಪ್ರಶಸ್ತಿಗೆ ಕೆ.ಎಚ್. ದಾಸಪ್ಪ ರೈ ಆಯ್ಕೆ

ಹೊಸದಿಗಂತ ವರದಿ ಮಂಗಳೂರು:

ನಗರದ ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾ ಕೇಂದ್ರ ವತಿಯಿಂದ ಬಜಾಲ್ ನಿವಾಸಿಯಾಗಿದ್ದ ಯಕ್ಷಗಾನ ಹಿರಿಯ ಕಲಾವಿದ ಬಿ. ಬಾಬು ಕುಡ್ತಡ್ಕ ಸ್ಮರಣಾರ್ಥ ಅವರ ಹೆಸರಿನಲ್ಲಿ ‘ಬಾಬು ಕುಡ್ತಡ್ಕ ಪ್ರಶಸ್ತಿ’ ಆರಂಭಿಸಲಾಗುತ್ತಿದೆ. ಚೊಚ್ಚಲ ಬಾಬು ಕುಡ್ತಡ್ಕ ಪ್ರಶಸ್ತಿಗೆ ತೆಂಕುತಿಟ್ಟಿನ ಹಿರಿಯ ಕಲಾವಿದ ಕೆ.ಎಚ್. ದಾಸಪ್ಪ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ 10,000 ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದೆ. ಅ.2ರಂದು ಮಧ್ಯಾಹ್ನ 2.30ರಿಂದ ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ವೇಳೆ ಜಿಲ್ಲೆಯ ಹೆಸರಾಂತ ಕಲಾವಿದರಿಂದ ‘ಕರ್ಣಾವಸಾನ’ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಬಲಿಪ, ಶಾಲಿನಿ, ಅಕ್ಷಯ್, ಹೆಬ್ಬಾರ್ ಮುಮ್ಮೇಳದಲ್ಲಿ ಶಂಭುಶರ್ಮ, ಪೆರ್ಮುದೆ, ಜಬ್ಬಾರ್, ಪ್ರದೀಪ ಸಾಮಗ ಭಾಗವಹಿಸುವರು ಎಂದು ಸ್ವಸ್ತಿಕ್ ಕಲಾ ಕೇಂದ್ರದ ಅಧ್ಯಕ್ಷ ಕೆ.ಸಿ. ಹರೀಶ್ಚಂದ್ರ ರಾವ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಬು ಕುಡ್ತಡ್ಕ ಅವರು 40 ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಯಕ್ಷಗಾನ ಮೇಳಗಳಲ್ಲಿ ಪಾತ್ರಧಾರಿಯಾಗಿ ಕಾರ್ಯನಿರ್ವಹಿಸಿ, ತನ್ನದೇ ಆದ ಕುಡ್ತಡ್ಕ ಮೇಳವನ್ನು 10 ವರ್ಷಗಳ ಕಾಲ ಮುನ್ನಡೆಸಿ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕೆ.ಎಚ್. ದಾಸಪ್ಪ ರೈ ಅವರು ಸುದೀರ್ಘ ಕಾಲ ವಿವಿಧ ಮೇಳಗಳಲ್ಲಿ ಪ್ರಬುದ್ಧ ವೇಷಧಾರಿಯಾಗಿ ಮೆರೆದವರು. ಕುಂಬ್ಳೆ ಮೇಳ ಸ್ಥಾಪಿಸಿ ಮುನ್ನಡೆಸಿದ್ದಾರೆ. ಪೌರಾಣಿಕದ ಜತೆಗೆ ತುಳು ಪ್ರಸಂಗಗಳಲ್ಲಿ ಹೆಸರು ಗಳಿಸಿದ ಅವರು ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ ಎಂದರು.
ಸ್ವಸ್ತಿಕ್ ಕಲಾ ಕೇಂದ್ರದ ಕಾರ್ಯದರ್ಶಿ ಶೋಭಾ ಹರೀಶ್, ಕೋಶಾಧಿಕಾರಿ ಆನಂದ ರಾವ್, ಶೈಕ್ಷಣಿಕ ಸಂಚಾಲಕಿ ಸುಮಲತಾ, ಸೇವಾ ಸಂಚಾಲಕ ನಾಗೇಶ್ ಎಂ ಉಪಸ್ಥಿತರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!