ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಿವುಡ್ ಸ್ಟಾರ್ ದಳಪತಿ ವಿಜಯ್ ನಟನೆಯ ಅತ್ಯಂತ ಬಹುನಿರೀಕ್ಷಿತ ಹಾಗೂ ಕೊನೆಯ ಚಲನಚಿತ್ರ ‘ಜನನಾಯಗನ್’ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಬರುವ ಜುಲೈ 23ರಂದು ಈ ಸಿನಿಮಾ ಜಾಗತಿಕವಾಗಿ ತೆರೆಕಾಣಲಿದೆ ಎಂದು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ. ಹೆಚ್.ವಿನೋತ್ ನಿರ್ದೇಶಿಸಿರುವ ಈ ಚಿತ್ರವು ಆ್ಯಕ್ಷನ್, ಸೆಂಟಿಮೆಂಟ್ ಹಾಗೂ ಪ್ರಮುಖ ಸಾಮಾಜಿಕ ಸಂದೇಶವನ್ನು ಒಳಗೊಂಡಿದೆ. ಈಗಾಗಲೇ ರಿಲೀಸ್ ಆಗಿರುವ ಹಾಡುಗಳು ಮತ್ತು ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿವೆ.
ನಕ್ಷತ್ರ ಪುಂಜದಂತಿರುವ ತಾರಾಗಣ
ವಿಜಯ್ ಸಕ್ರಿಯ ರಾಜಕಾರಣಕ್ಕೆ ಕಾಲಿಡುತ್ತಿರುವುದರಿಂದ ಈ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಭಾರಿ ಕ್ರೇಜ್ ಸೃಷ್ಟಿಯಾಗಿದೆ. ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡರೆ, ಬಾಲಿವುಡ್ ಸ್ಟಾರ್ ಬಾಬಿ ಡಿಯೋಲ್ ಖಳನಾಯಕನಾಗಿ ಅಬ್ಬರಿಸಲಿದ್ದಾರೆ. ಇವರೊಂದಿಗೆ ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಮಂದಿರಗಳಿಗೆ ದಳಪತಿ ಟೀಮ್ ಮುನ್ನೆಚ್ಚರಿಕೆ!
ಸಿನಿಮಾದ ಮೇಲಿರುವ ಭಾರಿ ಹೈಪ್ ನೋಡಿ ಥಿಯೇಟರ್‌ಗಳು ಟಿಕೆಟ್ ದರವನ್ನು ದುಪ್ಪಟ್ಟು ಮಾಡದಂತೆ ವಿಜಯ್ ತಂಡ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳು ಬಂದಾಗ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಜನರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತದೆ. ಆದರೆ, ‘ಜನನಾಯಗನ್’ ಚಿತ್ರಕ್ಕೆ ಪ್ರೇಕ್ಷಕರಿಂದ ನಿಗದಿತ ದರಕ್ಕಿಂತ ಒಂದು ರೂಪಾಯಿಯೂ ಹೆಚ್ಚು ಪಡೆಯಬಾರದು ಎಂದು ವಿಜಯ್ ಕಡೆಯಿಂದ ಥಿಯೇಟರ್ ಮಾಲೀಕರಿಗೆ ಕಡಕ್ ವಾರ್ನಿಂಗ್ ರವಾನೆಯಾಗಿದೆ.



