ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೈಬರ್ ನೆಟ್ ಹಗರಣದ ಪ್ರಕರಣದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ರಿಲೀಫ್ ಸಿಕ್ಕಿದೆ. ನವೆಂಬರ್ 30ರವರೆಗೆ ಬಂಧನದಿಂದ ರಕ್ಷಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಸ್ತರಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಆಂಧ್ರಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಚಂದ್ರಬಾಬು ನಾಯ್ಡು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠವು ಈ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಅಕ್ಟೋಬರ್ 20ರಂದು ನ್ಯಾಯಾಲಯವು ನವೆಂಬರ್ 9ಕ್ಕೆ ವಿಚಾರಣೆ ಮುಂದೂಡಿತ್ತು.
ಇಂದಿನ ವಿಚಾರಣೆ ವೇಳೆ, ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಎಫ್ಐಆರ್ ರದ್ದುಗೊಳಿಸುವಂತೆ ನಾಯ್ಡು ಸಲ್ಲಿಸಿರುವ ಮನವಿಯ ತೀರ್ಪನ್ನು ದೀಪಾವಳಿ ರಜೆ ನಂತರ ಪ್ರಕಟಿಸಲಾಗುವುದು ಎಂದು ನಾಯ್ಡು ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರಿಗೆ ನ್ಯಾಯ ಪೀಠ ತಿಳಿಸಿತು. ಅಲ್ಲದೇ, ಇದರ ತೀರ್ಪು ನೀಡಿದ ನಂತರ ಫೈಬರ್ ನೆಟ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದೂ ಹೇಳಿತು.
ಮತ್ತೊಂದೆಡೆ, ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರು ಹೈಕೋರ್ಟ್ನಿಂದ ನಾಲ್ಕು ವಾರಗಳ ಮಧ್ಯಂತರ ಜಾಮೀನು ಪಡೆದಿದ್ದಾರೆ ಎಂದು ಆಂಧ್ರಪ್ರದೇಶ ಸರ್ಕಾರದ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಆಗ ಪೀಠವು ಇದೇ ಅರ್ಜಿದಾರರ ಮತ್ತೊಂದು ಅರ್ಜಿಯಿದೆ. ಇದು ಒಂದರ ಮೇಲೆ ಇನ್ನೊಂದು ವ್ಯಾಪಿಸುವ ಸಾಧ್ಯತೆ ಹೊಂದಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ನವೆಂಬರ್ 30ಕ್ಕೆ ಫೈಬರ್ ನೆಟ್ ಹಗರಣದ ವಿಚಾರಣೆ ನಿಗದಿಪಡಿಸಲಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.