June 15, 2026
Monday, June 15, 2026
spot_img

ಜಾಗತಿಕ ತೈಲ ಬಿಕ್ಕಟ್ಟಿಗೆ ಮುಕ್ತಿ: ಅಮೆರಿಕ-ಇರಾನ್ ಮಹಾ ಸಮರಕ್ಕೆ ಕೊನೆಗೂ ಬಿದ್ದಿತು ಶಾಶ್ವತ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಆರ್ಥಿಕತೆ ಹಾಗೂ ಇಂಧನ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸರಿಸುಮಾರು 100 ದಿನಗಳ ಭೀಕರ ಸಂಘರ್ಷಕ್ಕೆ ಕೊನೆಗೂ ತೆರೆಬಿದ್ದಿದೆ. ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಹಾರ್ಮುಜ್ ಜಲಸಂಧಿಯನ್ನು ತಕ್ಷಣದಿಂದಲೇ ಟೋಲ್-ಮುಕ್ತ ಹಾಗೂ ಮುಕ್ತ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.

ಫೆಬ್ರವರಿ 28 ರಂದು ಆರಂಭವಾಗಿದ್ದ ಈ ಯುದ್ಧದಿಂದಾಗಿ ತೈಲ ಬಿಕ್ಕಟ್ಟಿನ ಆತಂಕ ಎದುರಾಗಿತ್ತು. ಈಗ ಅಮೆರಿಕ ನೌಕಾಪಡೆಯ ದಿಗ್ಬಂಧನ ತೆರವಾಗುತ್ತಿರುವುದರಿಂದ ಜಾಗತಿಕ ತೈಲ ಪೂರೈಕೆ ಎಂದಿನಂತೆ ಸರಾಗವಾಗಿ ಸಾಗಲಿದೆ. ಈ ಒಪ್ಪಂದವನ್ನು ಇರಾನ್ ಕೂಡ ದೃಢಪಡಿಸಿದ್ದು, ಮುಂದಿನ 60 ದಿನಗಳ ಕದನ ವಿರಾಮದ ಅವಧಿಯಲ್ಲಿ ಅಂತಿಮ ಹಂತದ ರಾಜತಾಂತ್ರಿಕ ಮಾತುಕತೆಗಳು ಮುಂದುವರಿಯಲಿವೆ ಎಂದು ತಿಳಿಸಿದೆ.

ಪಾಕಿಸ್ತಾನದ ಮಧ್ಯಸ್ಥಿಕೆ:


ಈ ಮಹತ್ವದ ಶಾಂತಿ ಒಪ್ಪಂದಕ್ಕೆ ಪಾಕಿಸ್ತಾನ ಪ್ರಮುಖ ಸಂಧಾನಕಾರನಾಗಿ ಕೆಲಸ ಮಾಡಿದೆ. ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮಾಹಿತಿ ನೀಡಿದ್ದಾರೆ. ಇರಾನ್‌ನ ಮಾಜಿ ಸುಪ್ರೀಂ ಲೀಡರ್ ಆಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆ ಜುಲೈನಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನವೇ ಈ ಕದನ ವಿರಾಮ ಜಾರಿಗೆ ಬಂದಿರುವುದು ವಿಶೇಷವಾಗಿದೆ. ಬರುವ ಜೂನ್ 19 ರಂದು ಸ್ವಿಟ್ಚರ್ಲೆಂಡ್‌ನಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಉಭಯ ದೇಶಗಳು ಅಧಿಕೃತವಾಗಿ ಸಹಿ ಹಾಕಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !