ಸಂಘಕ್ಕೆ ರಾಜಕೀಯಕ್ಕಿಂತ ಧಾರ್ಮಿಕತೆ ಹೆಚ್ಚು ಹತ್ತಿರ: ಮೋಹನ್ ಭಾಗವತ್

ಹೊಸದಿಗಂತ ವರದಿ, ಚಿತ್ರದುರ್ಗ:

ಸಂಘಕ್ಕೆ ಹೆಚ್ಚು ಹೊಂದುವುದು ರಾಜಕೀಯ ಅಲ್ಲ. ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ. ಹಾಗಾಗಿ ಸಂಘಕ್ಕೆ ರಾಜಕೀಯದವರಿಗಿಂತ ಸ್ವಾಮೀಜಿಗಳೇ ಹೆಚ್ಚು ಹತ್ತಿರವಾಗುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಹೇಳಿದರು.
ನಗರದ ಹೊರ ವಲಯದಲ್ಲಿರುವ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ದಲಿತ, ಹಿಂದುಳಿದ ವರ್ಗಗಳ ೨೧ ಮಠಾಧೀಶರೊಂದಿಗೆ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮೀಜಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ನಮ್ಮ ಸಮಾಜದಲ್ಲಿ ಕೆಲವು ಭಾಗ ಹಿಂದುಳಿಯಿತು. ಏಕೆಂದರೆ ಸಂಪರ್ಕ ಮುರಿದು ಹೋಯಿತು. ಹಿಂದು ಸಮಾಜದ ಎಲ್ಲಾ ಅಂಗಗಳನ್ನು ಸುಸ್ಥಿತಿಯಲ್ಲಿಡುವುದು ಕರ್ತವ್ಯ. ಮತ್ತೆ ಮತ್ತೆ ಸೇರುವುದರಿಂದ ಇದು ಸರಿ ಆಗುತ್ತದೆ. ಸಂಘ ಇದೇ ಪ್ರಯತ್ನ ಮಾಡುತ್ತಿದೆ. ಸಮಾಜದ ಎಲ್ಲಾ ಅಂಗಗಳ ಬಗ್ಗೆ ಸಂವೇದನೆ ಇರಬೇಕು. ಆಗಾಗ ಸೇರುವುದರಿಂದ ನಮಗೆ ಪರಸ್ಪರರ ಬಗ್ಗೆ ಅರಿವು ಹೆಚ್ಚಾಗುತ್ತದೆ. ಅರಿವು ಹೆಚ್ಚಾದಾಗ ಸಂಶಯಗಳು, ಅಪನಂಬಿಕೆಗಳು ದೂರ ಆಗುತ್ತವೆ. ಆಗ ಮನಸ್ಸುಗಳು ಒಂದಾಗುತ್ತವೆ ಎಂದರು.
ಹಿಂದೂ ಸಮಾಜದ ಪ್ರಮುಖ ಸಮಸ್ಯೆಗಳಾದ ಅಸ್ಪೃಶ್ಯತೆ, ವಿಷಮತೆ, ಅಸಮಾನತೆ ಇವುಗಳು ಮುಖ್ಯವಾಗಿ ಇರುವುದು ನಮ್ಮ ಮನಸ್ಸಿನಲ್ಲಿ. ಈ ಸಮಸ್ಯೆಗಳು ಹಲವಾರು ಶತಮಾನಗಳಿಂದ ನಮ್ಮ ಮನಸ್ಸಿನಲ್ಲಿವೆ. ಹಾಗಾಗಿ ಇದರ ಪರಿಹಾರಕ್ಕೂ ಸಮಯ ತಗುಲುವುದು. ನಿಧಾನವಾಗಿ ಇದನ್ನು ಮನಸ್ಸಿನಿಂದ ತೆಗೆಯುವ ಕೆಲಸವಾಗಬೇಕಿದೆ. ಅಲ್ಲಿಯವರೆಗೂ ಸಹನೆ ಮತ್ತು ಧೈರ್ಯವನ್ನು ನಾವು ಹೊಂದಬೇಕು. ಆ ಕಾರ್ಯದಲ್ಲಿ ನಾವು ನಿರತರಾಗಿದ್ದೇವೆ ಎಂದು ಹೇಳಿದರು.
ಭಾರತ ಭಾರತವಾಗಿ ಉಳಿಯಬೇಕಾದರೆ, ನಾವು ನಾವಾಗಿ ಉಳಿಯಬೇಕು. ಹಾಗಾಗಿ ಧರ್ಮವು ಎಲ್ಲಕಡೆ ಇರುವಂತೆ ಆಗಬೇಕು. ಮತಾಂತರ ಆಗುವುದರಿಂದ ನಮ್ಮಲ್ಲಿ ಪ್ರತ್ಯೇಕತೆಯನ್ನು ತರುತ್ತದೆ. ಮತಾಂತರ ಆದವರು ಮೂಲದಿಂದ ದೂರ ಉಳಿಯುವಂತೆ ಮಾಡುತ್ತದೆ. ಹಾಗಾಗಿ ನಾವು ಮತಾಂತರ ತಡೆಯುವ ಪ್ರಯತ್ನ ಮಾಡಬೇಕು ಎಂದರು.
ಸಂಸ್ಕಾರದ ಬಗ್ಗೆಯೂ ಗಮನ ಹರಿಸಬೇಕಿದೆ. ದೊಡ್ಡವರಿಗೆ ಗೌರವ ಕೊಡುವುದು, ನಮ್ಮ ಮಾತೆಯರು, ಸಹೋದರಿಯರಲ್ಲಿ ಹೇಗೆ ನಡೆದುಕೊಳ್ಳಬೇಕು. ಇವುಗಳನ್ನು ನಮ್ಮ ಸಮಾಜದ ನವ ಪೀಳಿಗೆಗಳಿಗೆ ಹೇಳಿಕೊಡಬೇಕಿದೆ. ಆಧುನಿಕ ಯುಗದಲ್ಲಿ ಶಿಕ್ಷಣ ದೊರೆಯುತ್ತಿದೆ. ಆದರೆ ಸಂಸ್ಕಾರ ದೂರವಾಗುತ್ತಿದೆ. ಸಂಸ್ಕಾರ, ನಿಷ್ಟೆ ದೃಢವಾಗಬೇಕೆಂದರೆ ಏನಾದರೊಂದು ರೀತಿಯ ಉಪಾಸನೆ ಜೋಡಿಸಿಕೊಳ್ಳಬೇಕು. ಸ್ವಾಮೀಜಿಗಳು ಸಂಸ್ಕಾರವಂತ ಸಮಾಜ ನಿರ್ಮಾಣ ಮಾಡಬೇಕು. ಎಲ್ಲರೂ ಒಟ್ಟಾಗಿ ಮುನ್ನಡೆಯಬಹುದು ಎಂದು ಹೇಳಿದರು.
ಇಂದು ನೀವೆಲ್ಲಾ ಮಠಾಧೀಶರು ಮಾಡುತ್ತಿರುವ ಪ್ರಯತ್ನ ಬೀಜರೂಪದಲ್ಲಿದೆ. ಇದು ಖಂಡಿತವಾಗಿ ಹೆಮ್ಮರವಾಗಿ ಬೆಳೆಯುತ್ತದೆ. ಫಲವನ್ನೂ ನೆರಳನ್ನೂ ನೀಡುತ್ತದೆ. ಮಾತ್ರವಲ್ಲ ಸಾವಿರಾರು ಬೀಜಗಳನ್ನು ಸೃಷ್ಟಿಸಿ. ಅವೂ ಭೂಮಿಗೆ ತಾಗಿ ಸಸಿಗಳಾಗಿ ಬೆಳೆದು ಹೆಮ್ಮರವಾಗಿ ಬೆಳೆಯುತ್ತವೆ. ಖಂಡಿತವಾಗಿ ಫಲಗಳನ್ನೂ ನೀಡುತ್ತವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಮ್ಮ ಜೊತೆ ಇದೆ. ಏನೇ ಬರಲಿ, ಸಂಘ ನಿಮ್ಮ ಜೊತೆ ಇರುತ್ತದೆ ಎಂದರು.
ನಮ್ಮದೇ ಒಂದು ಶೈಲಿ ಇದೆ. ಆ ಶೈಲಿಯಲ್ಲೇ ನಾವು ಮಾಡುತ್ತೇವೆ. ಸಂಘದ ರೀತಿ ಅತ್ಯಂತ ಪ್ರಾಕೃತಿಕವಾಗಿದ್ದು. ಸಂಘದ ಗತಿ ನಿಧಾನ ಗತಿ. ನಿಧಾನವಾಗಿ ಹೋದರೆ ದೂರ ಸಾಗಬಹುದು. ನಿಮ್ಮ ಜೊತೆ ಇದ್ದೇವೆ. ನಿಮ್ಮ ಜೊತೆ ಇರುತ್ತೇವೆ. ನಾವು ದೊಡ್ಡವರು ಎಂಬ ಕಾರಣಕ್ಕಾಗಿ ಅಲ್ಲ. ಬದಲಾಗಿ ಇದು ನಮ್ಮ ಕರ್ತವ್ಯ, ಹಾಗಾಗಿ. ನೀವು ಸಂಘವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ. ನಾವೆಲ್ಲರೂ ಹಿಂದು ಸಮಾಜದ ಅವಿಭಾಜ್ಯ ಅಂಗ ಎಂದು ಹೇಳಿದರು.
ಡಾ. ಶಾಂತವೀರ ಮಹಾಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಡಾ.ಪುರುಷೋತ್ತಮಾನಂದ ಸ್ವಾಮೀಜಿ, ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಬಸವ ಮಾಚಿದೇವ ಮಹಾಸ್ವಾಮೀಜಿ, ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ರೇಣುಕಾನಂದ ಮಹಾಸ್ವಾಮೀಜಿ, ವೇಮನಾನಂದ ಮಹಾಸ್ವಾಮೀಜಿ, ಶಾಂತಭೀಷ್ಮ ಅಂಬಿಗರ ಚೌಡಯ್ಯ ಮಹಾಸ್ವಾಮೀಜಿ, ಬಸವ ಭೃಂಗೀಶ್ವರ ಮಹಾಸ್ವಾಮೀಜಿ, ಡಾ. ಬಸವಕುಮಾರ ಮಹಾಸ್ವಾಮೀಜಿ, ದಯಾನಂದಪುರಿ ಮಹಾಸ್ವಾಮೀಜಿ, ಇಮ್ಮಡಿ ಕೇತೇಶ್ವರ ಮಹಾಸ್ವಾಮೀಜಿ, ಬಸವ ನಾಗೀದೇವ ಮಹಾಸ್ವಾಮೀಜಿ, ಜ್ಞಾನಾನಂದಪುರಿ ಮಹಾಸ್ವಾಮೀಜಿ, ಮಾತಾ ಬಿಸ್ಟದೇವಿಯವರು, ಬಸವ ಅರಳಯ್ಯ ಸ್ವಾಮೀಜಿ, ಪೂರ್ಣಾನಂದ ಭಾರತೀ ಸ್ವಾಮೀಜಿ, ಶ್ರೀಧರಾನಂದ ಸ್ವಾಮೀಜಿ ಆದಿಯಾಗಿ ದಲಿತ, ಹಿಂದುಳಿದ ವರ್ಗಗಳ ೨೧ ವಿವಿಧ ಮಠಾಧೀಶರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಎಲ್ಲರನ್ನೂ ಸ್ವಾಗತಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾ.ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ರವಿ ಮಲ್ಲಾಪುರ ವಂದಿಸಿದರು. ಆರ್‌ಎಸ್‌ಎಸ್ ಸಹಸರಕಾರ್ಯವಾಹರಾದ ಮುಕುಂದ, ಕ್ಷೇತ್ರೀಯ ಪ್ರಚಾರಕರಾದ ಸುಧೀರ, ಕ್ಷೇತ್ರೀಯ ಕಾರ್ಯವಾಹರಾದ ನಾ.ತಿಪ್ಪೇಸ್ವಾಮಿ, ಪಟ್ಟಾಭಿರಾಮ, ಗುರುಪ್ರಸಾದ, ನಂದೀಶ, ಸಾಮರಸ್ಯ ವೇದಿಕೆಯ ವಾದಿರಾಜ, ವಿಶ್ವ ಹಿಂದೂ ಪರಿಷತ್‌ನ ಬಸವರಾಜ ಸಂವಾದ ಸಭೆಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!