ಪ್ರವಾದಿ ಬಗ್ಗೆ ಹೇಳಿಕೆ ಭಾರತದ ಆಂತರಿಕ ವಿಚಾರ, ಸಮಸ್ಯೆ ದೊಡ್ಡದಾಗಿಸುವ ಅಗತ್ಯವಿಲ್ಲ: ಬಾಂಗ್ಲಾ ಸಚಿವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರವಾದಿ ಕುರಿತಾದ ಹೇಳಿಕೆ ವಿಚಾರವು ಭಾರತದ ಆಂತರಿಕ ವಿಷಯವಾಗಿದೆ. ಈ ವಿಚಾರವನ್ನು ಭಾರತವು ಬಗೆಹರಿಸಿಕೊಳ್ಳುತ್ತದೆ. ಢಾಕಾ ಸರ್ಕಾರವು ಈ ಕುರಿತು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವ ಡಾ.ಹಸನ್ ಮಹಮೂದ್ ಹೇಳಿದ್ದಾರೆ.
ಮೊದಲನೆಯದಾಗಿ, ಇದು ಬಾಂಗ್ಲಾದೇಶಕ್ಕೆ ಬಾಹ್ಯ ಸಮಸ್ಯೆಯಾಗಿದೆ. ಇದು ಭಾರತದಲ್ಲಿ ನಡೆದ ವಿಚಾರವೇ ಹೊರತು ಬಾಂಗ್ಲಾದೇಶದಲ್ಲ. ಈ ಬಗ್ಗೆ ನಾವು ಏನನ್ನೂ ಹೇಳಬೇಕಾಗಿಲ್ಲ ಎಂದು ಭಾರತೀಯ ಪತ್ರಕರ್ತರೊಂದಿಗೆ ನಡೆದ ಸಂವಾದಲ್ಲಿ ಮಹಮೂದ್ ಹೇಳಿದರು.
ಈ ವಿಷಯದಲ್ಲಿ ಭಾರತವು ಈಗಾಗಲೇ ಕ್ರಮ ಕೈಗೊಂಡಿದೆ. ಒಬ್ಬ ಬಿಜೆಪಿ ವಕ್ತಾರರನ್ನು ಅಮಾನತುಗೊಳಿಸಲಾಗಿದೆ, ಇನ್ನೊಬ್ಬರನ್ನು ಸದಸ್ಯತ್ವದಿಂದ ಕೈಬಿಡಲಾಗಿದೆ. ಅವರು ಈ ಸಮಸ್ಯೆಯನ್ನು ದೊಡ್ಡದಾಗಿ ಬಿಂಬಿಸುವ ಅಗತ್ಯವಿಲ್ಲ ಎಂದರು.
57- ಮುಸ್ಲಿಂ ರಾಷ್ಟ್ರಗಳ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಪ್ರತಿಭಟಿಸಿ ಭಾರತದ ವಿರುದ್ಧ ಟೀಕೆಪ್ರಹಾರ ನಡೆಸಿದಾಗ ಢಾಕಾ ಮೌನವಾಗಿದ್ದೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಮೂದ್ “ನಾವು ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಂಡಿಲ್ಲ. ಪ್ರವಾದಿಯವರಿಗೆ ಎಲ್ಲಿಯೇ ಅವಮಾನ ಸಂಭವಿಸಿದರೂ ಅದನ್ನು ಬಲವಾಗಿ ಖಂಡಿಸುತ್ತೇವೆ. ಆದರೆ ಭಾರತ ಸರ್ಕಾರವು ಈ ಬಗ್ಗೆ ಕ್ರಮ ಕೈಗೊಂಡಿದೆ. ನಾವು ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಬೇಕು. ಭಾರತದ ಕಾನೂನು ಸರ್ವಾಶಕ್ತವಾಗಿದೆ ಎಂದು ಹೇಳಿದರು.
ಬಾಂಗ್ಲಾದೇಶಕ್ಕೆ ಇದೇನು ದೊಡ್ಡ ವಿಚಾರವಲ್ಲ. ಇಂತಹ ವಿಚಾರವನ್ನು ನಾವೇಕೆ ಪ್ರಚೋದಿಸಬೇಕು,  ಬೆಂಕಿ ಹಚ್ಚುವುದು ನಮ್ಮ ಕೆಲಸವಲ್ಲ ಎಂದು ಹೇಳಿದರು.
ಶುಕ್ರವಾರ ಢಾಕಾದಲ್ಲಿ ಮುಸ್ಲಿಂ ಗುಂಪುಗಳಿಂದ ಕೆಲವು ಪ್ರತಿಭಟನೆಗಳು ನಡೆದಿದ್ದು, ನಗರದ ಮುಖ್ಯ ಮಸೀದಿಯ ಹೊರಗೆ ಪ್ರತಿಭಟನೆಗಳು ನಡೆದಿವೆ. ಬಾಂಗ್ಲಾದೇಶದ ವಿರೋಧ ಪಕ್ಷಗಳು ಮತ್ತು ಇಸ್ಲಾಮಿಸ್ಟ್ ಗುಂಪುಗಳು ಮೋದಿ ಸರ್ಕಾರವನ್ನು ಟೀಕಿಸುವಲ್ಲಿ ತಮ್ಮ ಸರ್ಕಾರದ ವೈಫಲ್ಯವನ್ನು ಟೀಕಿಸಿವೆ.
ಆದಾಗ್ಯೂ, ಬಾಂಗ್ಲಾದೇಶ ಸರ್ಕಾರವು ಭಾರತಕ್ಕೆ ಬೆಂಬಲ ನೀಡುವ ತನ್ನ ನಿಲುವಿಗೆ ದೃಢವಾಗಿ ಉಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!