ಪ್ರಧಾನಿ ಬಾಲ ಪುರಸ್ಕಾರ ಪಡೆದ ಕರ್ನಾಟಕದ ರೆಮೋನಾ ಪಿರೇರಾ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ (ಪಿಎಂಆರ್‌ಬಿಪಿ) ಪುರಸ್ಕೃತರೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು 2022 ಮತ್ತು 2021 ವರ್ಷಗಳಲ್ಲಿ ಪಿಎಂಆರ್‌ಬಿಪಿ ಪ್ರಶಸ್ತಿ ಪುರಸ್ಕೃತರಿಗೆ ಡಿಜಿಟಲ್ ಪ್ರಮಾಣಪತ್ರಗಳನ್ನು ನೀಡಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ಪ್ರಮಾಣಪತ್ರ ನೀಡಲು ಈ ತಂತ್ರಜ್ಞಾನವನ್ನು ಮೊದಲ ಬಾರಿಗೆ ಬಳಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಜುಬಿನ್ ಇರಾನಿ ಮತ್ತು ರಾಜ್ಯ ಸಚಿವ ಡಾ. ಮುಂಜಪರಾ ಮಹೇಂದ್ರಭಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕರ್ನಾಟಕದ ರೆಮೋನಾ ಎವೆಟ್ಟೆ ಪಿರೇರಾ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಅವರು, ಭಾರತೀಯ ನೃತ್ಯದ ಬಗ್ಗೆ ರೆಮೋನಾ ಅವರ ಆಸಕ್ತಿಯನ್ನು ಚರ್ಚಿಸಿದರು. ಈ ಆಸಕ್ತಿಯನ್ನು ಮುಂದುವರಿಸಲು ಅವರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಪ್ರಧಾನಿಯವರು ವಿಚಾರಿಸಿದರು. ತನ್ನ ಮಗಳ ಕನಸನ್ನು ನನಸು ಮಾಡಲು ತನ್ನ ಕಷ್ಟಗಳನ್ನು ಕಡೆಗಣಿಸಿದ್ದಕ್ಕಾಗಿ ಆಕೆಯ ತಾಯಿಯನ್ನು ಪ್ರಧಾನಿ ಅಭಿನಂದಿಸಿದರು. ರೆಮೋನಾ ಅವರ ಸಾಧನೆಗಳು ಅವರ ವಯಸ್ಸಿಗಿಂತ ಬಹಳ ದೊಡ್ಡದಾಗಿದೆ ಎಂದು ಹೇಳಿದ ಪ್ರಧಾನಿ, ಅವರ ಕಲೆ ದೇಶದ ಸೌಮ್ಯ ಶಕ್ತಿಯನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ ಎಂದು ಹೇಳಿದರು.

ಯಾರು ಈ ರೆಮೋನಾ ಪಿರೇರಾ?
ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆಗೊಳಪಟ್ಟ ಹಾಗೂ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪಡೆದ ರೆಮೋನಾ ಎವೆಟ್ಟೆ ಪಿರೇರಾ ಯಾರು? 15ರ ಹರೆಯದ ರೆಮೋನಾ 2019ರಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದ್ದರು. ದಿ. ಎವರೆಸ್ಟ್ ಪಿರೇರಾ ಮತ್ತು ಗ್ಲಾಡಿಸ್ ಸೆಲಿನ್ ಪಿರೇರಾ ಅವರ ಪುತ್ರಿ ರೆಮೋನಾ ಅವರಿಗೆ ಹಿರಿಯ ಸಹೋದರ ರೊನಾಲ್ಡೊ ರಾಕ್ಸನ್ ಇದ್ದಾರೆ.
ದಕ್ಷಿಣ ಭಾರತದ ಆಸ್ಥಾನ ಸಂಪ್ರದಾಯಗಳಿಂದ ಹುಟ್ಟಿಕೊಂಡ ಭರತನಾಟ್ಯ ನೃತ್ಯ ಪ್ರಕಾರವು ಯೋಗ, ಹಿಂದು ಪುರಾಣ, ಇತಿಹಾಸ, ನಾಟಕ ಮತ್ತು ಸೌಂದರ್ಯಶಾಸ್ತ್ರದ ಅಧ್ಯಯನವನ್ನು ಒಳಗೊಂಡಿದೆ. ಭರತನಾಟ್ಯ ನೃತ್ಯದ ಮುಖ್ಯ ಉದ್ದೇಶವೆಂದರೆ, ಪ್ರದರ್ಶಕನು ಪ್ರಾರ್ಥನೆಗಳನ್ನು ಸಲ್ಲಿಸಲು ಅಥವಾ ಶ್ರೇಷ್ಠ ಹಿಂದು ಮಹಾಕಾವ್ಯಗಳ ಕಥೆಗಳನ್ನು ತಿಳಿಸಲು ಹೆಜ್ಜೆಗಳು, ಸನ್ನೆಗಳು ಮತ್ತು ಮುಖಭಾವಗಳ ನಿಖರವಾದ ವಾಚನದ ಮೂಲಕ ಪ್ರೇಕ್ಷಕರಲ್ಲಿ ರಸ ಭಾವವನ್ನು ಉಂಟುಮಾಡುವುದು. ಈ ಎಲ್ಲ ಸಂಪ್ರದಾಯಗಳನ್ನು ರೆಮೋನಾ ಅನುಸರಿಸುತ್ತಾರೆ.

ರೆಮೋನಾ ಪಿರೇರಾರ ಸಾಧನೆಗಳು

ಇಂಡಿಯಾ ಬುಕ್ ಆಫ್ ರೆಕಾರ್ಡ್, ಭಾರತ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಲಂಡನ್‌ನ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್. ರಾಷ್ಟ್ರೀಯ ಪ್ರಶಸ್ತಿಗಳು: ಛತ್ತೀಸ್‌ಗಢ-ಕಲಾ ಸಂಸ್ಕೃತಿ ಸನ್ಮಾನ- 2018, ಒರಿಸ್ಸಾ- ಭಾರತೀಯ ನೃತ್ಯ ಅಕಾಡೆಮಿ ಮತ್ತು ಏಷ್ಯನ್ ಡ್ಯಾನ್ಸ್ ಸೊಸೈಟಿ- 2018, ಭಾರತೀಯಕಲಾಶ್ರೀ ರತ್ನ ಪ್ರಶಸ್ತಿ, ಕೋನಾರ್ಕ್ ನೃತ್ಯಕಲಾ ರತ್ನ ಪ್ರಶಸ್ತಿ- 2018, ದಿಲ್ಲಿ – ರಾಷ್ಟ್ರೀಯ ಗೌರವ ಪ್ರಶಸ್ತಿ, ಸಾಹಿತ್ಯ ಸಂಸ್ಕೃತಿ ಪ್ರಶಸ್ತಿ, ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ, ಕನ್ನಡ ನಾಡು ನುಡಿ ಉತ್ಸವ- ಪ್ರತಿಭಾ ಪುರಸ್ಕಾರ, ಗೋವಾ- ಕರುನಾಡ ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರೀಯ ಕೊಂಕಣ ನೃತ್ಯ ಶಿರೋಮಣಿ ಪ್ರಶಸ್ತಿ, ಹೈದರಾಬಾದ್-ನೃತ್ಯಶ್ರೀ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಪ್ರಶಸ್ತಿ.

ವಾರಣಾಸಿ- ನೃತ್ಯ ಕಲಾ ಸನ್ಮಾನ ಪ್ರಶಸ್ತಿ, ಗಂಗಾ ನೃತ್ಯೋತ್ಸವ-ಪ್ರಶಸ್ತಿ, ಮೊರಾದಾಬಾದ್-ಕಾರ್ತಿಕೇಯ ಸಂಸ್ಕೃತಿ ಸಂತ – 2018, ಹರಿಯಾಣ-ಶ್ರೀ ರಾಮಲೀಲಾ ಉತ್ಸವ ಸಮಿತಿ -2018 (ರೋಹ್ಟಕ್), ಆಂಧ್ರಪ್ರದೇಶ- ಶ್ರೀಕಾಳ ಹಸ್ತಿ ದೇವಸ್ಥಾನದ ಪ್ರಮಾಣಪತ್ರ, ರಾಘವೇಂದ್ರ ಸತ್ಭಾವನಾ ಪ್ರಶಸ್ತಿ (ಮಂತ್ರಾಲಯ), ಶಿರಸಿ-ಶ್ರೀಗುರು ಸದ್ಭಾವನಾ ಪ್ರಶಸ್ತಿ, ಮುಂಬೈ-ದಿ ಬಾಂಬೆ ಆಂಧ್ರ ಮಹಾಸಭಾ ಮತ್ತು ಜಿಮ್ಖಾನಾ- 2018, ಶಿಮ್ಲಾ-ಅಭಿನಯ್ – 2018, ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿ, ನಾಸಿಕ್-ಆಲ್ ಇಂಡಿಯಾ ಡ್ಯಾನ್ಸ್ ಸ್ಪೋರ್ಟ್ ಫೆಡರೇಶನ್ – 10ನೇ ರಾಷ್ಟ್ರೀಯ ನೃತ್ಯ ಕ್ರೀಡಾ ಚಾಂಪಿಯನ್‌ಶಿಪ್ ಆಯೋಜಿಸಿದ್ದು ನಾಸಿಕ್ ಜಿಲ್ಲಾ ಡ್ಯಾನ್ಸ್ ಸ್ಪೋರ್ಟ್ ಅಸೋಸಿಯೇಷನ್‌ನಲ್ಲಿ ಮೊದಲ ಸ್ಥಾನ ಗೆದ್ದಿದ್ದಾರೆ. ಇನ್ನೂ ಹಲವು ಪ್ರಶಸ್ತಿ, ಪುರಸ್ಕಾರ, ಬಹುಮಾನಗಳು ರೆಮೋನಾ ಮುಡಿಗೇರಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!