July 11, 2026
Saturday, July 11, 2026
spot_img

‘ಪರಾಶಕ್ತಿ’ ಬಾಕ್ಸ್ ಆಫೀಸ್ ಫ್ಲಾಪ್ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಿದ ಸಂಭಾವನೆ ಸಮರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಸುಧಾ ಕೊಂಗರ ಹಾಗೂ ‘ಡಾನ್ ಪಿಕ್ಚರ್ಸ್’ ನಡುವಿನ ಹಣಕಾಸಿನ ವಿವಾದವೀಗ ಮದ್ರಾಸ್ ಹೈಕೋರ್ಟ್ ತಲುಪಿದೆ. ಶಿವಕಾರ್ತಿಕೇಯನ್ ಹಾಗೂ ಶ್ರೀಲೀಲಾ ನಟನೆಯ ‘ಪರಾಶಕ್ತಿ’ ಚಿತ್ರವನ್ನು ನಿರ್ದೇಶಿಸಲು ಸುಧಾ ಅವರಿಗೆ ಜಿಎಸ್‌ಟಿ ಸೇರಿ ಒಟ್ಟು ₹17.70 ಕೋಟಿ ಸಂಭಾವನೆ ನಿಗದಿಯಾಗಿತ್ತು. ಆದರೆ ನಿರ್ಮಾಣ ಸಂಸ್ಥೆಯು ಕೇವಲ ₹9.31 ಕೋಟಿ ನೀಡಿದ್ದು, ಬಾಕಿ ಇರುವ ₹8.39 ಕೋಟಿ ಪಾವತಿಸಿಲ್ಲ ಎಂದು ಆರೋಪಿಸಿ ಸುಧಾ ಕೊಂಗರ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲದೆ, ಬಾಕಿ ಹಣ ಸಿಗುವವರೆಗೆ ಸಂಸ್ಥೆಯ ಮುಂದಿನ ಚಿತ್ರ ‘ಇದಯಮ್ ಮುರಳಿ’ ಮತ್ತು ‘ಪರಾಶಕ್ತಿ’ ಟಿವಿ ಪ್ರಸಾರಕ್ಕೆ ತಡೆ ನೀಡುವಂತೆ ಕೋರಿದ್ದರು.

ಸುಧಾ ಸತ್ಯ ಮುಚ್ಚಿಟ್ಟಿದ್ದಾರೆಂದ ಡಾನ್ ಪಿಕ್ಚರ್ಸ್!

ಇದೀಗ ಕೋರ್ಟ್‌ಗೆ ಕೌಂಟರ್ ಅಫಿಡವಿಟ್ ಸಲ್ಲಿಸಿರುವ ಡಾನ್ ಪಿಕ್ಚರ್ಸ್, ಸುಧಾ ಕೊಂಗರ ಅವರ ಮೇಲೆ ಗಂಭೀರ ಆರೋಪ ಮಾಡಿದೆ. ಸುಧಾ ಅವರು ಸತ್ಯವನ್ನು ಮರೆಮಾಚಿದ್ದಾರೆ ಎಂದು ಸಂಸ್ಥೆ ಹೇಳಿದೆ. ‘ಪರಾಶಕ್ತಿ’ ಸಿನಿಮಾದ ಇದೇ ಕಥೆಗಾಗಿ ಅವರು ಈ ಹಿಂದೆ ತಮ್ಮದೇ ಅಂಗಸಂಸ್ಥೆಯಾದ ‘2ಡಿ ಎಂಟರ್ಟೈನ್‌ಮೆಂಟ್’ನಿಂದ ₹4.12 ಕೋಟಿ ಪಡೆದಿದ್ದರು. ಆದರೆ ಒಪ್ಪಂದದ ವೇಳೆ ಈ ಹಣದ ವಿವರವನ್ನು ಮರೆಮಾಚಿದ್ದಾರೆ. ಜೊತೆಗೆ ಇದೇ ಸ್ಕ್ರಿಪ್ಟ್ ಇಟ್ಟುಕೊಂಡು ‘ಅಕ್ರಾ ಎಂಟರ್ಟೈನ್‌ಮೆಂಟ್’ ಜೊತೆಗೂ ಒಪ್ಪಂದ ಮಾಡಿಕೊಂಡಿದ್ದರು ಎಂದು ಪ್ರತ್ಯಾರೋಪ ಮಾಡಿದೆ.

ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ ಸಿನಿಮಾ

ತಮಿಳರ ಹಿಂದಿ ಹೇರಿಕೆ ವಿರೋಧಿ ಹೋರಾಟದ ಕಥಾಹಂದರ ಹೊಂದಿದ್ದ ‘ಪರಾಶಕ್ತಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸೋಲು ಕಂಡಿತ್ತು. ಶಿವಕಾರ್ತಿಕೇಯನ್ ನಾಯಕರಾಗಿ, ಶ್ರೀಲೀಲಾ ನಾಯಕಿಯಾಗಿ ಹಾಗೂ ರವಿ ಮೋಹನ್ ಖಳನಾಯಕನಾಗಿ ನಟಿಸಿದ್ದ ಈ ಚಿತ್ರ ನಿರೀಕ್ಷಿತ ಯಶಸ್ಸು ಗಳಿಸದೆ ತೀವ್ರ ಟೀಕೆಗೆ ಒಳಗಾಗಿತ್ತು. ಸದ್ಯ ಈ ಸಂಭಾವನೆ ಸಮರ ತಾರಕಕ್ಕೇರಿದ್ದು, ನ್ಯಾಯಾಲಯದ ತೀರ್ಪಿನ ಮೇಲೆ ಎಲ್ಲರ ಕಣ್ಣಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !