ಮಳಲಿ ಮಸೀದಿ ನವೀಕರಣಕ್ಕೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ

ಹೊಸದಿಗಂತ ವರದಿ,ಮಂಗಳೂರು:

ತಾಲೂಕಿನ ಗುರುಪುರ ಹೋಬಳಿಯ ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಮಸೀದಿ ನವೀಕರಣ ವೇಳೆ ದೇವಸ್ಥಾನದ ಗರ್ಭಗುಡಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ತಿಳಿಸಿದ್ದಾರೆ.
ಮಸೀದಿ ಕಟ್ಟಡದಲ್ಲಿ ಯಾವುದೇ ನವೀಕರಣ, ಕಾಮಗಾರಿ ನಡೆಸಬಾರದು, ಕಟ್ಟಡಕ್ಕೆ ಹಾನಿ ಉಂಟುಮಾಡಬಾರದು. ಕಟ್ಟಡದ ಒಳಗೆ ಪ್ರವೇಶಿಸಬಾರದು ಎಂದು ನ್ಯಾಯಾಲಯ ತಿಳಿಸಿದೆ. ಮುಂದಿನ ವಿಚಾರಣೆಯನ್ನು ಜೂ.೬ಕ್ಕೆ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಹಿಂಪ ಸ್ವಾಗತ:
ದೇವಸ್ಥಾನ ಹೋಲುವ ಜಾಗ ಮತ್ತು ಕಟ್ಟಡದಲ್ಲಿ ಯಾವುದೇ ಕಾಮಗಾರಿ ,ಕಟ್ಟಡಕ್ಕೆ ಹಾನಿಯಾಗದಂತೆ ತಡೆಯಾಜ್ಞೆ ಹಾಗೂ ದೇವಸ್ಥಾನ ಹೋಲುವ ಕಟ್ಟಡದ ಒಳಗಡೆ ಪ್ರವೇಶ ನಿಷೇಧಿಸಿ ಕೋರ್ಟ್ ಆದೇಶ ನೀಡಿರುವುದನ್ನು ವಿಶ್ವಹಿಂದು ಪರಿಷತ್ ಸ್ವಾಗತಿಸಿದೆ.
ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ 1/10ರಲ್ಲಿ ಅಸ್ಸಾಯಿದ್ ಅಬ್ದುಲ್ಲಾಹಿಲ್ ಮದನಿ ಜುಮಾ ಮಸೀದಿ ಕಟ್ಟಡ ನವೀಕರಣ ಸಂದರ್ಭದಲ್ಲಿ ಮಸೀದಿ ಅರ್ಧ ಕಟ್ಟಡ ಕೆಡವಿದಾಗ ಪುರಾತನ ದೇವಸ್ಥಾನ ಪತ್ತೆಯಾಗಿದೆ. ಗಂಜಿಮಠ ನಿವಾಸಿ ಧನಂಜಯ ಎಂಬವರು ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಹೂಡಿದ್ದು, ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಸದ್ರಿ ಜಾಗದಲ್ಲಿ ದೇವಸ್ಥಾನವನ್ನು ಹೋಲುವ ಕಟ್ಟಡವಿದೆಯೆಂದು ಮನಗಂಡು, ಕಟ್ಟಡದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಮತ್ತು ದೇವಸ್ಥಾನ ಹೋಲುವ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ತಡೆಯಾಜ್ಞೆ ನೀಡಿದೆ. ಕಟ್ಟಡದ ಒಳಗಡೆ ಮಸೀದಿ ಕಮಿಟಿಯವರಾಗಲಿ ಮತ್ತು ಅನುಯಾಯಿಗಳಾಗಲಿ ಪ್ರವೇಶವನ್ನು ನಿಷೇಧಿಸಿ ಆದೇಶಿಸಿರುವುದನ್ನು ವಿಶ್ವಹಿಂದು ಪರಿಷತ್ ಸ್ವಾಗತಿಸುತ್ತದೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!