September 2, 2026
Wednesday, September 2, 2026
spot_img

ರೇಣುಕಾಸ್ವಾಮಿ ಕೊ*ಲೆ ಪ್ರಕರಣ: ನಟ ದರ್ಶನ್ ಪರ ವಕೀಲರು ದಿಢೀರ್ ಬದಲಾಗಿದ್ದೇಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಟ ದರ್ಶನ್ ತೂಗುದೀಪ ಭಾಗಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಾನೂನು ಹೋರಾಟದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇದುವರೆಗೆ ದರ್ಶನ್ ಪರವಾಗಿ ನ್ಯಾಯಾಲಯದಲ್ಲಿ ಸುದೀರ್ಘ ವಾದ ಮಂಡಿಸುತ್ತಿದ್ದ ವಕೀಲ ಎಸ್. ಸುನೀಲ್ ಕುಮಾರ್ ವಕಾಲತ್ತಿನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಅವರ ಜಾಗಕ್ಕೆ ರಾಜ್ಯದ ಪ್ರಸಿದ್ಧ ಹಿರಿಯ ಕ್ರಿಮಿನಲ್ ವಕೀಲ ಹಶ್ಮತ್ ಪಾಷಾ ದರ್ಶನ್ ಪರವಾಗಿ ಕೇಸ್ ಕೈಗೆತ್ತಿಕೊಂಡಿದ್ದಾರೆ.

ಈ ಸಂಬಂಧ ಸುನೀಲ್ ಕುಮಾರ್ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಅಧಿಕೃತ ಮೆಮೋ ಸಲ್ಲಿಕೆ ಮಾಡಿದ್ದು, ಕೇವಲ ನಟ ದರ್ಶನ್ ಮಾತ್ರವಲ್ಲದೆ ಪ್ರಕರಣದ ಇತರ ಆರೋಪಿಗಳಾದ ಲಕ್ಷ್ಮಣ್ ಹಾಗೂ ನಾಗರಾಜ್ ವಕಾಲತ್ತಿನಿಂದಲೂ ತಾವೂ ಹಿಂದೆ ಸರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಲಾಯರ್ ಬದಲಾದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ!

ಹೊಸ ವಕೀಲರ ನೇಮಕವಾದ ತಕ್ಷಣವೇ ನಟ ದರ್ಶನ್ ಪರ ಕಾನೂನು ತಂಡವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರೇಣುಕಾಸ್ವಾಮಿ ಪ್ರಕರಣದ ಒಟ್ಟು 60 ಮುಖ್ಯ ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಈ ಹಿಂದೆ ವಿಧಿಸಿದ್ದ ಒಂದು ವರ್ಷದ ಕಠಿಣ ಕಾಲಮಿತಿಯನ್ನು ಕಡಿತಗೊಳಿಸುವಂತೆ ಕೋರಿ ಮರುಪರಿಶೀಲನಾ ಅರ್ಜಿ ಮತ್ತು ಮಾರ್ಪಾಡು ಅರ್ಜಿಯನ್ನು ಸಲ್ಲಿಸಲಾಗಿದೆ. ಪ್ರಕರಣದ ತನಿಖಾ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಿ ಶೀಘ್ರವಾಗಿ ಮುಕ್ತಾಯಗೊಳಿಸಲು ಈ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ:

ವಕೀಲರು ಹಿಂದೆ ಸರಿಯಲು ಕಾರಣವೇನು?

ಮೂಲಗಳ ಪ್ರಕಾರ, ಕಕ್ಷಿದಾರರ ಕಡೆಯಿಂದ ಸೂಕ್ತ ಮಾರ್ಗದರ್ಶನ ಹಾಗೂ ನಿರೀಕ್ಷಿತ ಸಹಕಾರ ಸಮಯಕ್ಕೆ ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ವಕೀಲ ಸುನೀಲ್ ಕುಮಾರ್ ಈ ಹಠಾತ್ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. 59ನೇ ಸೆಷನ್ಸ್ ನ್ಯಾಯಾಲಯವು ಈಗಾಗಲೇ ದರ್ಶನ್‌ಗೆ ಹಿರಿಯ ವಕೀಲ ಹಶ್ಮತ್ ಪಾಷಾ ವಕಾಲತ್ತು ವಹಿಸಿರುವ ಕುರಿತು ಅಧಿಕೃತ ಮಾಹಿತಿ ನೀಡಿದೆ.  

ಹೊಸ ಹಿರಿಯ ವಕೀಲರ ಪ್ರವೇಶ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಹೊಸ ಅರ್ಜಿಗಳಿಂದಾಗಿ, ಮುಂದಿನ ದಿನಗಳಲ್ಲಿ ನಟ ದರ್ಶನ್ ಜಾಮೀನು ಪ್ರಕ್ರಿಯೆ ಹಾಗೂ ಕಾನೂನು ಹೋರಾಟ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !