ಹೊಸ ದಿಗಂತ ವರದಿ, ವಿಜಯಪುರ:
ರೇಣುಕಾಸ್ವಾಮಿ ಕೊಲೆ ಪ್ರಕರಣದ ದರ್ಶನ ಗ್ಯಾಂಗ್ ನ 10 ನೇ ಆರೋಪಿ ವಿನಯನನ್ನು ಶನಿವಾರ ನಗರ ಹೊರ ವಲಯ ಕೇಂದ್ರ ಕಾರಾಗೃಹ (ದರ್ಗಾ ಜೈಲು) ಕ್ಕೆ ಪೊಲೀಸರು ಕರೆತಂದಿದ್ದಾರೆ. ದರ್ಗಾ ಜೈಲು ಎಂದೇ ವಿಜಯಪುರ ಕೇಂದ್ರ ಕಾರಾಗೃಹ ಖ್ಯಾತಿ ಪಡೆದಿದೆ.
ಕೆಎ 01 ಜಿ 6892 ನಂಬರಿನ ಪೊಲೀಸ್ ವಾಹನದಲ್ಲಿ ವಿನಯನನ್ನು ಕರೆತರಲಾಗಿದ್ದು, ಎರಡು ಬ್ಯಾಗ್ ಗಳೊಂದಿಗೆ ಆರೋಪಿ ವಿನಯ ಆಗಮಿಸಿದ್ದಾನೆ.
ಪರಪ್ಪನ ಅಗ್ರಹಾರದಿಂದ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಈತನನ್ನು ಪೊಲೀಸರು ಕರೆ ತಂದಿದ್ದು, ವಿನಯ ಕುಟುಂಬಸ್ಥರಿಗೆ ಸೇರಿದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು.
ದರ್ಶನ್ ಆಪ್ತ ವಿನಯ್ 10 ನೇ ಆರೋಪಿಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ವಿನಯ ವಿಜಯಪುರ ಜೈಲಿಗೆ ಸ್ಥಳಾಂತರ ಆಗಲಿದ್ದಾನೆ ಎನ್ನಲಾಗಿತ್ತು. ಕೊನೆಗೂ ಇಂದು ನಾಲ್ಕನೇ ದಿನ ವಿಜಯಪುರ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಬೆಂಗಳೂರಿನ ಆರ್’ಆರ್ ನಗರದಲ್ಲಿರುವ ಸ್ಟೋನಿ ಬ್ರೂಕ್ ಹೋಟೆಲ್ ಮಾಲೀಕನಾದ ವಿನಯಗೆ ಜೈಲು ಅಧಿಕಾರಿಗಳು ಹೊಸ ಕೈದಿ ನಂಬರ್ ನೀಡಲಿದ್ದಾರೆ.