ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ನಟ ದರ್ಶನ್ ಮತ್ತು ಸಹವರ್ತಿಗಳ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ಅಥವಾ ನಾಳೆ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಸಂಬಂಧ ಈಗಾಗಲೇ 4 ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಸಿರುವ ಪೊಲೀಸರು, ಇದೀಗ 30ಕ್ಕೂ ಹೆಚ್ಚು ಜನರ ಸಾಕ್ಷಿಗಳು, ಎಫ್‌ಎಸ್‌ಎಲ್ ಹಾಗೂ ಇತರೆ ತಾಂತ್ರಿಕ ತನಿಖೆಯ ದಾಖಲೆಗಳು ಸೇರಿ 40ಕ್ಕೂ ಹೆಚ್ಚು ಸಾಕ್ಷ್ಯಗಳನ್ನೊಳಗೊಂಡ 1300 ಪುಟಗಳ ಹೆಚ್ಚುವರಿ ಆರೋಪಪಟ್ಟಿಯನ್ನು ಸಲ್ಲಿಸಲಿದ್ದೇವೆ ಎಂದು ಮೂಲಗಳು ತಿಳಿಸಿವೆ.
ಹತ್ಯೆ ನಡೆದ ಶೆಡ್‌ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ಇದ್ದರು ಎಂಬುದಕ್ಕೆ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ. ಆರೋಪಿ ಪವನ್ ಎಂಬಾತನ ಮೊಬೈಲ್‌ನಲ್ಲಿದ್ದ ಕೆಲವು ಫೋಟೋಗಳನ್ನ ರಿಟ್ರೀವ್ ಮಾಡಲಾಗಿದ್ದು, ಅವುಗಳ ಮೂಲಕ ಘಟನಾ ಸ್ಥಳದಲ್ಲಿ ದರ್ಶನ್ ಇದ್ದರು ಎಂಬುದು ಸಾಬೀತಾಗಿದೆ. ಘಟನೆ ಬಳಿಕ ಪವನ್ ತನ್ನ ಮೊಬೈಲ್‌ನಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದ. ಆದರೆ, ಆತನ ಮೊಬೈಲ್ ವಶಕ್ಕೆ ಪಡೆದು ರಿಟ್ರೀವ್ ಮಾಡಿದಾಗ ಫೋಟೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.