ಹೊಸದಿಗಂತ ವರದಿ, ಉಡುಪಿ:
ವಿಶ್ವ ಹಿಂದೂ ಪರಿಷದ್ ನ 60 ನೇ ವರ್ಷಾಚರಣೆಯ ಅಂಗವಾಗಿ ಉಡುಪಿಯಲ್ಲಿ ಮಂಗಳವಾರ, ಭವ್ಯ ಶೌರ್ಯ ಜಾಗರಣ ರಥಯಾತ್ರೆ ವಿಜೃಂಭಣೆಯಿಂದ ನಡೆಯಿತು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಪುಣೆಯ ಸಾಮಾಜಿಕ ಮುಖಂಡ ಕಡ್ತಲ ವಿಶ್ವನಾಥ್ ಪೂಜಾರಿ ಶೌರ್ಯ ಜಾಗರಣ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು.
ಜೋಡುಕಟ್ಟೆಯಿಂದ ಆರಂಭವಾದ ಈ ಕೇಸರಿ ಮಯ ರಥಯಾತ್ರೆಯೂ, ಕೋರ್ಟ್ ರಸ್ತೆ, ಕೆ.ಎಮ್.ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಕಲ್ಸಂಕ, ಕಡಿಯಾಳಿ ಮೂಲಕ ಸಾಗಿಬಂದು ಎಮ್.ಜಿ.ಎಮ್ ಮೈದಾನದಲ್ಲಿ ಸಂಪನ್ನಗೊಂಡಿತು.
ಸಾವಿರಾರು ಹಿಂದೂ ಕಾರ್ಯಕರ್ತರ ಜೈ ಶ್ರೀರಾಮ್ ಘೋಷ ವಾಕ್ಯದೊಂದಿಗೆ ನಡೆದ ರಥಯಾತ್ರೆಯಲ್ಲಿ 15 ಕ್ಕೂ ಹೆಚ್ಚು ಮಕ್ಕಳು, ಯುವಕ,ಯುವತಿಯರು ಹಾಗು ಹಿರಿಯರ ಕುಣಿತ ಭಜನೆ ತಂಡ, ಕೇರಳ ಚೆಂಡೆ, ನಾಸಿಕ್ ಬ್ಯಾಂಡ್, ಕಹಳೆ, ತಟ್ಟಿರಾಯ, ರಾಮ, ಸೀತೆ, ಆಂಜನೇಯ ಸೇರಿದಂತೆ ಸ್ಥಬ್ಧ ಚಿತ್ರಗಳು ಗಮನ ಸೆಳೆದವು.
ಮೆರವಣಿಗೆಯಲ್ಲಿ ಆರ್.ಎಸ್.ಎಸ್ ಹಿರಿಯ ಮುಖಂಡ ಶಂಭು ಶೆಟ್ಟಿ, ವಿಹಿಂಪ ಮುಖಂಡರಾದ ಸುನೀಲ್ ಕೆ.ಆರ್, ದಿನೇಶ್ ಮೆಂಡನ್, ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಮುಖಂಡರಾದ ರಶ್ಮಿ.ಬಿ.ಶೆಟ್ಟಿ, ಶ್ಯಾಮಲಾ ಕುಂದರ್, ನಯನಾ ಗಣೇಶ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಸೇರಿದಂತೆ ಅನೇಕರು ಭಾಗಿಯಾಗಿದ್ದರು.