ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ನೌಕಾಪಡೆಯು ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನೊಬ್ಬನನ್ನು ರಕ್ಷಿಸಿದೆ. ಈ ಮಾನವೀಯ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಬೈನಿಂದ ಸುಮಾರು 370 ಕಿಲೋಮೀಟರ್ ದೂರದ ಸಾಗರ ಪ್ರದೇಶದಲ್ಲಿ ಚೀನಾದ ಝೋಂಗ್ ಶಾನ್ ಮೆನ್ ಎಂಬ ನೌಕೆಯು ಹವಾಮಾನ ವೈಪರೀತ್ಯದಿಂದ ಚಲಿಸಲು ಸಾಧ್ಯವಾಗಿಲ್ಲ. ಈ ವೇಳೆ ಹಡಗಿನ ನಾವಿಕನಿಗೆ ಗಂಭೀರವಾಗಿ ಗಾಯವಾಗಿದ್ದು, ರಕ್ತಸ್ರಾವದಿಂದ ತೀವ್ರ ತೊಂದರೆಗೆ ಸಿಲುಕಿದ್ದನು. ಈ ಕುರಿತು ಮುಂಬೈನಲ್ಲಿರುವ ಮರಿಟೈಮ್ ರೆಸ್ಕ್ಯೂ ಕೋ-ಆಪರೇಷನ್ ಸೆಂಟರ್‌ಗೆ ಮಂಗಳವಾರ (ಜುಲೈ 24) ರಾತ್ರಿ ಕರೆ ಬಂತು .
ಇದಾದ ಬಳಿಕ ಭಾರತೀಯ ನೌಕಾಪಡೆಯ ಸೀ ಕಿಂಗ್ ಹೆಲಿಕಾಪ್ಟರ್ ಅನ್ನು ಶಿಖ್ರಾದಲ್ಲಿರುವ ಭಾರತದ ನೌಕಾಪಡೆಯ ಏರ್ ಸ್ಟೇಷನ್‌ನಿಂದ ಕಾರ್ಯಾಚರಣೆ ಆರಂಭಿಸಿದೆ . ಹವಾಮಾನ ವೈಪರೀತ್ಯದ ಕುರಿತು ಮಾಹಿತಿ ಇದ್ದರೂ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆಯು ಚೀನಾದ ನಾವಿಕನನ್ನು ರಕ್ಷಿಸಿ, ಆತನಿಗೆ ವೈದ್ಯಕೀಯ ನೆರವು ನೀಡಿದೆ.
ಈ ರೋಚಕ ವಿಡಿಯೊವನ್ನು ನೌಕಾಪಡೆಯು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನೌಕಾಪಡೆಯ ಮಾನವೀಯತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಭಾರತದ ನೌಕಾಪಡೆಯ ಐಎನ್‌ಎಸ್ ಸುಮಿತ್ರ ಸಮರನೌಕೆಯ ಮೂಲಕ ಅರಬ್ಬೀ ಸಮುದ್ರದಲ್ಲಿ ಸೋಮಾಲಿಯಾ ಕಡಲ್ಗಳ್ಳರಿಂದ ಪಾಕಿಸ್ತಾನದ 19 ನಾವಿಕರನ್ನು ರಕ್ಷಿಸಲಾಗಿತ್ತು.