ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೂನ್ಯ ಕೋವಿಡ್ ನೀತಿಯನ್ನು ಅನುಸರಿಸುತ್ತಿರುವ ಚೀನಾದಲ್ಲಿ, ಕಟ್ಟುನಿಟ್ಟಾದ ಕರೋನಾ ನಿಯಮಗಳಿಂದ ಜನರು ತೀವ್ರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಧಿಕಾರಿಗಳ ವರ್ತನೆ ವಿರುದ್ಧ ಹಲವೆಡೆ ಜನ ಪ್ರತಿಭಟನೆ ನಡೆಸುತ್ತಿರುವ ಘಟನೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ನಡೆಯುತ್ತಿವೆ. ಗ್ವಾಂಗ್ಜುನಲ್ಲಿರುವ ಹೈಜು ಜಿಲ್ಲೆಯ ಪ್ರದೇಶದಲ್ಲಿ ಕರೋನಾ ಪ್ರಕರಣಗಳು ಬೆಳಕಿಗೆ ಬಂದ ಕೂಡಲೇ ಅಧಿಕಾರಿಗಳು ಆ ಪ್ರದೇಶದ ಎಲ್ಲ ಜನರನ್ನು ಕ್ವಾರಂಟೈನ್ ಮಾಡಲು ಪ್ರಯತ್ನಿಸಿದರು.
ಜನರನ್ನು ಅವರ ಮನೆಗಳಿಗೆ ಹೋಗಲು ಬಿಡದೆ ಎಲ್ಲರನ್ನು ಒಂದೇ ಸ್ಥಳದಲ್ಲಿ ಕ್ವಾರಂಟೈನ್ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದು ಆ ಸ್ಥಳದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದ್ರು. ಸರ್ಕಾರದ ಈ ತೀರ್ಮಾನದ ವಿರುದ್ಧ ಅಲ್ಲಿನ ಜನರು ರೊಚ್ಚಿಗೆದ್ದು ಬ್ಯಾರಿಕೇಡ್ಗಳನ್ನು ಕಿತ್ತೆಸೆದು ಮುಂದೆ ಸಾಗಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜನರನ್ನು ತಡೆಯಲು ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಪ್ರಯತ್ನ ವಿಫಲವಾಯಿತು.
ಈ ಪ್ರತಿಭಟನೆಯಲ್ಲಿ ಇಂತಿಷ್ಟು ಜನ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿಲ್ಲ, ಏಕೆಂದರೆ ಸಾವಿರಾರು ಜನ ಅಧಿಕಾರಿಗಳ ವಿರುದ್ಧ ಮುಗಿಬಿದ್ದು ಹಾಕಿದ್ದ ಬ್ಯಾರಿಕೇಡ್ಗಳನ್ನು ಕಿತ್ತೆಸೆದರು. ಗ್ವಾಂಗ್ಜುನಲ್ಲಿ ದಾಖಲಾಗುತ್ತಿರುವ ಕೊರೋನಾ ಪ್ರಕರಣಗಳು ಸೋಂಕಿತರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ಇಡೀ ಜಗತ್ತು ಕೋವಿಡ್ ನೀತಿಯಿಂದ ಮುಕ್ತಿ ನೀಡಿರುವಾಗ ಚೀನಾ ಶೂನ್ಯ ಕೋವಿಡ್ ನೀತಿಯನ್ನು ಅನುಸರಿಸುತ್ತಿದೆ ಮತ್ತು ಕಠಿಣ ನಿರ್ಬಂಧಗಳನ್ನು ವಿಧಿಸುತ್ತಿದೆ. ಇದು ಆ ದೇಶದ ಜನರನ್ನು ತೀವ್ರ ತೊಂದರೆಗೆ ಸಿಲುಕಿಸುತ್ತಿದೆ.