ದಿಗಂತ ವರದಿ ಮಡಿಕೇರಿ:
ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲ ಒಂದಾಗಿ ನಡೆಯಬೇಕಿದೆ. ಸ್ವಾತಂತ್ರ್ಯದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಯಾವುದೇ ತಾರತಮ್ಯವಿಲ್ಲದೆ,ಎಲ್ಲರೂ ಒಟ್ಟುಗೂಡಿ ಪ್ರಗತಿಯತ್ತ ಚಿಂತನೆ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್.ಭೋಸರಾಜು ಕರೆ ನೀಡಿದರು.
ಕೊಡಗು ಜಿಲ್ಲಾಡಳಿತದ ವತಿಯಿಂದ ನಗರದ ಕೋಟೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ 78 ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಲಿದಾನಗೈದ ಮಹನೀಯರ ಆದರ್ಶವನ್ನು ಗೌರವಿಸಿ
ಸಾಮರಸ್ಯದಿಂದ ಬಾಳ್ವೆ ನಡೆಸುವ ಜವಾಬ್ದಾರಿ ನಮ್ಮದಾಗಿದೆ. ಇದೇ ಸಂದರ್ಭದಲ್ಲಿ ನಮ್ಮ ದೇಶದ
ಐಕ್ಯತೆ, ಸಮಗ್ರತೆ, ಶಾಂತಿ ಸಂಸ್ಕೃತಿಗಳ ರಕ್ಷಣೆಗೆ ಕೈಜೋಡಿಸುವುದಾಗಿ ಪಣತೊಡುವುದರೊಂದಿಗೆ ಸ್ವಾತಂತ್ರ್ಯ ಹೋರಾಟದ ಶತಮಾನದ ಇತಿಹಾಸ ಇಂದಿನ ಅಭಿವೃದ್ಧಿಗೆ ಮುನ್ನೋಟವಾಗಲಿ ಎಂದು ಸಚಿವರು ಆಶಿಸಿದರು.