ಭಾಗಮಂಡಲ-ತಲಕಾವೇರಿ ಕ್ಷೇತ್ರಗಳಲ್ಲಿ ಪಿಂಡ ಪ್ರದಾನ, ತೀರ್ಥಸ್ನಾನಕ್ಕೆ ನಿರ್ಬಂಧ: ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಸಮಾಧಾನ

ಹೊಸದಿಗಂತ ವರದಿ, ಕೊಡಗು:

ತಲಕಾವೇರಿ- ಭಾಗಮಂಡಲ ಕ್ಷೇತ್ರಗಳಲ್ಲಿ ಪ್ರವಾಸಿಗರಿಗೆ ಕಡಿವಾಣ ಹಾಕುವುದನ್ನು ಬಿಟ್ಟು, ಪಿಂಡ ಪ್ರದಾನ ಸೇರಿದಂತೆ ಸ್ಥಳೀಯ ಮೂಲ ನಿವಾಸಿಗಳ ಧಾರ್ಮಿಕ ಆಚರಣೆಗೆ ತಡೆಯೊಡ್ಡಿರುವುದು ಸರಿಯಲ್ಲ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಸಮಾಧಾನ‌ ವ್ಯಕ್ತಪಡಿಸಿದೆ.
ಅಲ್ಲದೆ, ಈ ಕೂಡಲೇ ಸ್ಥಳೀಯರಿಗೆ ಪಿಂಡ ಪ್ರದಾನ ಕಾರ್ಯ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಡಳಿತ ಹಾಗೂ ಸರಕಾರವನ್ನು ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟಿರ ಪ್ರವೀಣ್ ಉತ್ತಪ್ಪ, ಭಾಗಮಂಡಲ ತಲಕಾವೇರಿ ಕ್ಷೇತ್ರ ಸ್ಥಳೀಯ ಮೂಲ ನಿವಾಸಿಗಳ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದು, ಕೊಡವರು ಸೇರಿದಂತೆ ಇಲ್ಲಿನ ಮೂಲ ನಿವಾಸಿಗಳು ಹಾಗೂ ಅನಾದಿ ಕಾಲದಿಂದಲೂ ಬದುಕು ಕಟ್ಟಿಕೊಂಡ ವಿವಿಧ ಜನಾಂಗಗಳು ಕಾವೇರಿ ಮಾತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಕೊರೋನಾ ನೆಪದಲ್ಲಿ ಸ್ಥಳೀಯರ ಧಾರ್ಮಿಕ ಆಚರಣೆಗೆ ತಡೆಯೊಡ್ಡಿರುವುದು ಸರಿಯಲ್ಲ, ಈಗಾಗಲೇ ತಲಕಾವೇರಿ ಕ್ಷೇತ್ರದಲ್ಲಿ ತೀರ್ಥ ಸ್ನಾನವಿಲ್ಲದೆ ಸ್ಥಳೀಯರ ಕೆಲವೊಂದು ಧಾರ್ಮಿಕ ಕಟ್ಟುಪಾಡುಗಳು ಅಪೂರ್ಣವಾಗಿದ್ದು, ಇದೀಗ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನಡೆಸಲಾಗುವ ಪಿಂಡ ಪ್ರದಾನಕ್ಕೂ ತಡೆಯೊಡ್ಡಿರುವುದು ಸರಿಯಲ್ಲ. ಕೂಡಲೇ ಸ್ಥಳೀಯರ ಧಾರ್ಮಿಕ ಭಾವನೆಗೆ ಬೆಲೆ ಕೊಟ್ಟು ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ಮಾಡಿಕೊಡುವುದರೊಂದಿಗೆ ಪಿಂಡ ಪ್ರಧಾನ ಮಾಡಿದವರಿಗೆ ತಲಕಾವೇರಿಯಲ್ಲಿ ತೀರ್ಥ ಸ್ನಾನಕ್ಕೂ ಅವಕಾಶ ಮಾಡಿಕೊಡಬೇಕೆಂದು ಎಂದು ಒತ್ತಾಯಿಸಿದ್ದಾರೆ.
ಕೊರೋನಾ ಸಮಯವಾಗಿರುವ ಕಾರಣ ಪ್ರವಾಸಿಗರನ್ನು ಒಂದಷ್ಟು ಸಮಯ ಕ್ಷೇತ್ರದಿಂದ ಹೊರಗಿಟ್ಟು ಸ್ಥಳೀಯರ ಧಾರ್ಮಿಕ ಆಚರಣೆ ಮಾಡಲು ಅವಕಾಶ ಮಾಡಿಕೊಡಬೇಕಿದೆ. ಹಾಗೇ ಕಳೆದೆರಡು ವರ್ಷದಿಂದ ತಲಕಾವೇರಿಯಲ್ಲಿ ತೀರ್ಥ ಸ್ನಾನಕ್ಕೂ ಅವಕಾಶವಿಲ್ಲದೆ ಮೂಲನಿವಾಸಿಗಳ ಧಾರ್ಮಿಕ ಆಚರಣೆಯ ಕಟ್ಟುಪಾಡುಗಳು ಅಪೂರ್ಣವಾಗಿದ್ದು, ಭಾಗಮಂಡಲದಲ್ಲಿ ಪಿಂಡ ಪ್ರಧಾನ ಮಾಡಿದ ನಂತರ ತಲಕಾವೇರಿಯಲ್ಲಿ ತೀರ್ಥಸ್ನಾನ ಮಾಡಿದರೆ ಮಾತ್ರ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಇರುವುದರಿಂದ ಇಲ್ಲಿನ ನಿವಾಸಿಗಳ ಧಾರ್ಮಿಕ ಭಾವನೆಗೆ ಬೆಲೆ ಕೊಟ್ಟು ಭಾಗಮಂಡಲದಲ್ಲಿ ಪಿಂಡ ಪ್ರದಾನ ಮಾಡಿದವರಿಗೆ ಮಾತ್ರ ತಲಕಾವೇರಿಯ ತೀರ್ಥ ಕುಂಡಿಕೆಯ ಸಮೀಪದ ಕೊಳದಲ್ಲಿ ತೀರ್ಥಸ್ನಾನಕ್ಕೂ ಅವಕಾಶ ಮಾಡಿಕೊಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!