August 14, 2026
Friday, August 14, 2026
spot_img

Ai ಮಾದರಿ ‘ಫೇಬಲ್ 5’, ‘ಮಿಥೋಸ್ 5’ ಬಳಕೆಗೆ ನಿರ್ಬಂಧ: ಅಚ್ಚರಿ ಮೂಡಿಸಿದ ಆಂಥ್ರೋಪಿಕ್ ಪ್ರಕಟಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ಮಾದರಿಗಳಾದ ‘ಫೇಬಲ್ 5’ ಮತ್ತು ‘ಮಿಥೋಸ್ 5’ ಬಳಕೆಯನ್ನು ವಿದೇಶಿ ನಾಗರಿಕರಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಎಐ ಸಂಸ್ಥೆ ಆಂಥ್ರೋಪಿಕ್ ತಿಳಿಸಿದೆ.
ಅಮೆರಿಕ ಸರ್ಕಾರದ ಹೊಸ ನಿರ್ದೇಶನದ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಈ ನಿರ್ಬಂಧವು ಆಂಥ್ರೋಪಿಕ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಉದ್ಯೋಗಿಗಳ ಮೇಲೂ ಪರಿಣಾಮ ಬೀರಿದ್ದು, ಈ ಕುರಿತು ಕಂಪನಿ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದೆ.

ಅಮೆರಿಕ ಸರ್ಕಾರವು ಅತ್ಯಾಧುನಿಕ ಎಐ ತಂತ್ರಜ್ಞಾನಗಳ ಲಭ್ಯತೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ಅದರ ಭಾಗವಾಗಿ ಈ ನಿರ್ಬಂಧ ವಿಧಿಸಲಾಗಿದೆ, ವಾಣಿಜ್ಯ ಇಲಾಖೆಯ ನಿರ್ದೇಶನದ ಆಧಾರದ ಮೇಲೆ ಈ ಆದೇಶ ಜಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಗ್ರಾಹಕರಿಗೆ ಉಂಟಾಗಿರುವ ತೊಂದರೆಗೆ ಕ್ಷಮೆಯಾಚಿಸಿರುವ ಆಂಥ್ರೋಪಿಕ್, ಇದು ಒಂದು ತಪ್ಪು ತಿಳುವಳಿಕೆಯಿಂದ ಉಂಟಾದ ಪರಿಸ್ಥಿತಿ ಎಂದು ನಾವು ನಂಬಿದ್ದೇವೆ. ಸಾಧ್ಯವಾದಷ್ಟು ಬೇಗ ಸೇವೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದೆ.

ಅಮೆರಿಕ ಸರ್ಕಾರದಿಂದ ಬಂದ ನಿರ್ದೇಶನದಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ಕಾರಣಗಳನ್ನು ಉಲ್ಲೇಖಿಸಲಾಗಿಲ್ಲ ಎಂದು ಕಂಪನಿ ತಿಳಿಸಿದೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅತ್ಯಾಧುನಿಕ ಎಐ ಮಾದರಿಗಳನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವ ಮೊದಲು ಅವುಗಳಿಂದ ರಾಷ್ಟ್ರೀಯ ಭದ್ರತೆಗೆ ಉಂಟಾಗಬಹುದಾದ ಅಪಾಯಗಳನ್ನು ಪರಿಶೀಲಿಸಲು ವಿಶೇಷ ಚೌಕಟ್ಟನ್ನು ರೂಪಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !