ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಗಡಿಗಳಲ್ಲಿ ಬಿಲ್ ಪಾವತಿ ವೇಳೆ ಗ್ರಾಹಕರ ಫೋನ್ ನಂಬರ್ ನೀಡಲು ಒತ್ತಾಯಿಸದಂತೆ ಗ್ರಾಹಕರ ವ್ಯವಹಾರಗಳ ಸಚಿವಾಲಯವು ಚಿಲ್ಲರೆ ವ್ಯಾಪಾರಿಗಳಿಗೆ ಸೂಚನೆ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಯಾವುದೇ ಅಂಗಡಿಗಳಿಗೆ ಹೋದರೂ ಬಿಲ್ ಕೊಡುವ ಮೊದಲು ಮೊಬೈಲ್ ನಂಬರ್ ಕೇಳುತ್ತಾರೆ. ಒಂದುವೇಳೆ ಗ್ರಾಹಕರು ತಮ್ಮ ಫೋನ್ ನಂಬರ್ ಕೊಡಲು ನಿರಾಕರಿಸಿದರೆ, ಆಗ ನಮಗೆ ಸೇವೆಗಳು ಸಿಗುವುದಿಲ್ಲ ಎಂದು ಹಲವು ಗ್ರಾಹಕರು ದೂರು ನೀಡಿದ್ದರು. ಗ್ರಾಹಕರ ದೂರಿನ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಇದೊಂದು ನಿರ್ಬಂಧಿತ ವ್ಯಾಪಾರ ಪದ್ಧತಿಯಾಗಿದ್ದು, ಖರೀದಿದಾರರ ವೈಯಕ್ತಿಕ ಸಂಪರ್ಕದ ವಿವರಗಳನ್ನು ನೀಡುವಂತೆ ಒತ್ತಾಯಿಸಬಾರದು ಎಂದು ರೋಹಿತ್ ಕುಮಾರ್ ಚಿಲ್ಲರೆ ವ್ಯಾಪಾರಿಗಳಿಗೆ ಸಲಹೆ ಕೊಟ್ಟಿದ್ದಾರೆ.
ಬಿಲ್ ಪಡೆದುಕೊಳ್ಳುವ ಸಲುವಾಗಿ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಮೊಬೈಲ್ ನಂಬರ್ ನೀಡುವುದು ಭಾರತದಲ್ಲಿ ಕಡ್ಡಾಯವಲ್ಲ. ಈ ರೀತಿ ಮೊಬೈಲ್ ನಂಬರ್ ನೀಡುವುದರಿಂದ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಗ್ರಾಹಕರು ಮೊಬೈಲ್ ನಂಬರ್ ನೀಡಲು ಹಿಂಜರಿಯುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಈ ಕ್ರಮ ಜಾರಿಗೆ ತರಲಾಗಿದೆ.