ಹೊಸದಿಗಂತ ಡಿಜಿಟಲ್ ಡೆಸ್ಕ್:
68 ವಯಸ್ಸಿನ ನಿವೃತ್ತ ಶಿಕ್ಷಕಿಯೊಬ್ಬರನ್ನು ಹತ್ಯೆಗೈದು ಎರಡೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಇರ್ಫಾನ್ ಬಂಧಿತ ಆರೋಪಿ. ಈತ 2022ರ ಸೆಪ್ಟೆಂಬರ್ 8 ರಂದು ವಿದ್ಯಾರಣ್ಯಪುರದಲ್ಲಿ ನಡೆದಿದ್ದ ಎಸ್. ಪ್ರಸನ್ನಕುಮಾರಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಮನೆಯಲ್ಲಿ ಮಹಿಳೆ ಒಂಟಿಯಾಗಿ ಇರುವುದಾಗಿ ತಿಳಿದ ನಂತರ ಆಕೆಯ ನೆರೆಯವನಾದ ಟಿ ನಾಗೇಂದ್ರ ಮತ್ತು ಆತನ ಇಬ್ಬರು ಸಹಚರರೊಂದಿಗೆ ಸೇರಿ ಚಿನ್ನಾಭರಣ ಹಾಗೂ ಹಣ ದೋಚಲು ಸಂಚು ರೂಪಿಸಿದ್ದರು.
ದರೋಡೆ ವೇಳೆ ಆರೋಪಿಗಳು ಪ್ರಸನ್ನ ಕುಮಾರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.ಈಗಾಗಲೇ ಬಂಧಿಸಲಾಗಿದ್ದ ನಾಗೇಂದ್ರ ಮತ್ತು ಕೆ ರಾಮರಾಜು ನ್ಯಾಯಾಂಗ ಬಂಧನದಲ್ಲಿದ್ದು, ಆರೋಪಿ ಇರ್ಫಾನ್ ತಲೆಮರೆಸಿಕೊಂಡಿದ್ದ. ಇತ್ತೀಚೆಗಷ್ಟೇ ಆತ ಚಿತ್ತೂರಿನಲ್ಲಿ ತಲೆಮರೆಸಿಕೊಂಡಿರುವ ವಿಚಾರ ಪೊಲೀಸರಿಗೆ ಗೊತ್ತಾಗಿತ್ತು. ಸ್ವಂತ ಮನೆ ಹೊಂದಿಲ್ಲದ ಆರೋಪಿ, ಆಗಾಗ್ಗೆ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದನು. ಪೊಲೀಸರು ಆತನ ಸ್ನೇಹಿತರೊಬ್ಬರನ್ನು ಸಂಪರ್ಕಿಸುವುದರೊಂದಿಗೆ ಆತನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.