ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ನಲ್ಲಿ ಚಾಂಪಿಯನ್ ಆಗಲು ಹರಸಾಹಸ ಪಡುತ್ತಿರುವ ಪಂಜಾಬ್ ಕಿಂಗ್ ತಂಡವೂ ಪ್ರತಿ ಹರಾಜಿಗೂ ಮುನ್ನ ಸ್ಟಾರ್ ಆಟಗಾರರಿಗೆ ಕೋಕ್ ನೀಡಿ,ನಿರೀಕ್ಷೆಗೂ ಮೀರಿದ ಹಣ ನೀಡಿ ಸ್ಟಾರ್ ಆಟಗಾರನನ್ನು ಖರೀದಿಸಿ ಗೆಲುವಿಗೆ ಸಾಹಸ ಮಾಡುತ್ತಿದೆ. ಆದ್ರೆ ಪಂಜಾಬ್ ಕಿಂಗ್ ತಂಡಕ್ಕೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
ಇದರ ನಡುವೆ ಇದೀಗ ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕ ಮತ್ತು ಬಾಲಿವುಡ್ ನಟಿ ಪ್ರೀತಿ ಜಿಂಟಾ ಚಂಡೀಗಢ ಹೈಕೋರ್ಟ್‌ನಲ್ಲಿ ಫ್ರಾಂಚೈಸಿಯ ಮತ್ತೊಬ್ಬ ಸಹ- ಮಾಲೀಕರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಸಹ-ಮಾಲೀಕ ಮತ್ತು ಕೈಗಾರಿಕೋದ್ಯಮಿ ಮೋಹಿತ್ ಬರ್ಮನ್ ತನ್ನ ಷೇರುಗಳ ಒಂದು ಭಾಗವನ್ನು ಬೇರೆ ಯಾವುದೇ ಸಂಸ್ಥೆಗೆ ಮಾರಾಟ ಮಾಡುವುದನ್ನು ತಡೆಯುವಂತೆ ಪ್ರೀತಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ವಾಸ್ತವವಾಗಿ ಪಂಜಾಬ್ ಕಿಂಗ್ ಫ್ರಾಂಚೈಸಿಗೆ ಮೂವರು ಮಾಲೀಕರಿದ್ದಾರೆ. ಅವರಲ್ಲಿ ಪ್ರೀತಿ ಜಿಂಟಾ, ಮೋಹಿತ್ ಬರ್ಮನ್ ಮತ್ತು ನೆಸ್ ವಾಡಿಯಾ ಸೇರಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು KPH ಡ್ರೀಮ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಬರುತ್ತದೆ. ಈ ಫ್ರಾಂಚೈಸಿ 48 ಪ್ರತಿಶತ ಷೇರುಗಳು ಮೋಹಿತ್ ಬರ್ಮನ್ ಹೊಂದಿದ್ದಾರೆ. ಉಳಿದಂತೆ ಪ್ರೀತಿ ಜಿಂಟಾ 23 ಪ್ರತಿಶತ ಷೇರುಗಳನ್ನು ಹೊಂದಿದ್ದರೆ, ನೆಸ್ ವಾಡಿಯಾ 23 ಪ್ರತಿಶತ ಷೇರುಗಳನ್ನು ಹೊಂದಿದ್ದಾರೆ. ಇವರುಗಳಲ್ಲದೆ ಕರಣ್ ಪೌಲ್ ಅವರ ಬಳಿಯೂ ಒಂದಷ್ಟು ಷೇರುಗಳಿವೆ.
ಆದರೆ ಇದೀಗ 48 ಪ್ರತಿಶತ ಷೇರುಗಳನ್ನು ಹೊಂದಿರುವ ಮೋಹಿತ್ ಬರ್ಮನ್, ತಮ್ಮ ಷೇರಿನ ಸ್ವಲ್ಪ ಪಾಲನ್ನು ಮತ್ತೊಂದು ಸಂಸ್ಥೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ ಪ್ರೀತಿ ಜಿಂಟಾ ಇದರ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ವರದಿ ಹೇಳಿದೆ.
ಆದರೆ ಬರ್ಮನ್ ಈ ಊಹಾಪೋಹವನ್ನು ನಿರಾಕರಿಸಿದ್ದು, ನನ್ನ ಪಾಲಿನ ಷೇರುಗಳನ್ನು ನಾನು ಯಾರಿಗೂ ಮಾರಾಟ ಮಾಡುತ್ತಿಲ್ಲ ಎಂದಿದ್ದಾರೆ. ಆದಾಗ್ಯೂ, ಬರ್ಮನ್ ಅವರು ತಮ್ಮ ಷೇರಿನ ಶೇಕಡಾ 11.5 ರಷ್ಟು ಪಾಲನ್ನು ಬಹಿರಂಗಪಡಿಸದ ಸಂಸ್ಥಗೆ ಮಾರಾಟ ಮಾಡಲು ಉದ್ದೇಶಿಸಿದ್ದಾರೆ ಎಂದು ವರದಿಗಳು ಬಹಿರಂಗಪಡಿಸಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಾಲೀಕರ ನಡುವಿನ ಈ ಹಗ್ಗಾಜಗ್ಗಾಟ ಯಾವ ರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.