ರಿಂಕ್ ಹಾಕಿ ಪಂದ್ಯಾವಳಿ: ಚೇಂದಂಡ ತಂಡಕ್ಕೆ ವಿಜಯಮಾಲೆ

ಹೊಸದಿಗಂತ ವರದಿ ಮಡಿಕೇರಿ:

ಕೊಡವ ಹಾಕಿ ಅಕಾಡೆಮಿ ವತಿಯಿಂದ ಕೊಡವ ಕೌಟುಂಬಿಕ ಹಾಕಿ ಜನಕ ಪಾಡಂಡ ದಿ. ಕುಟ್ಟಪ್ಪ ಸ್ಮರಣಾರ್ಥ ಮೊದಲ ಬಾರಿಗೆ ಆಯೋಜಿಸಿದ್ದ 5-ಎ ಸೈಡ್ ರಿಂಕ್ ಹಾಕಿ ಪಂದ್ಯಾವಳಿಯಲ್ಲಿ ಚೇಂದಂಡ ತಂಡ ಕುಪ್ಪಂಡ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಕುಪ್ಪಂಡ (ಕೈಕೇರಿ) ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಹನ್ನೊಂದು ದಿನಗಳಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿದ್ದ ಪಂದ್ಯಾವಳಿಗೆ ವರ್ಣರಂಜಿತ ತೆರೆ ಎಳೆಯಲಾಯಿತು.114 ತಂಡಗಳು ಸೇರಿ ಒಟ್ಟು 1130 ಕ್ರೀಡಾಪಟುಗಳು ಭಾಗವಹಿಸಿ ಹಾಕಿ ನಮ್ಮೆಯ ರಂಗು ಹೆಚ್ಚಿಸಿದ್ದರು.

ಕುಪ್ಪಂಡ, ಚೇಂದಂಡ, ಪರದಂಡ, ನೆಲ್ಲಮಕ್ಕಡ ಕುಟುಂಬ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು. ತೀವ್ರ ಹಣಾಹಣಿಯಲ್ಲಿ ಕುಪ್ಪಂಡ ಹಾಗೂ ಚೇಂದಂಡ ಗೆಲುವು ಸಾಧಿಸಿ ಫೈನಲ್’ನಲ್ಲಿ ಮುಖಾಮುಖಿಯಾದವು.
ಅತ್ಯಂತ ರೋಚಕತೆಯಿಂದ ಕೂಡಿದ ಪಂದ್ಯಾವಳಿಯಲ್ಲಿ ಎರಡೂ ತಂಡಗಳು ಗೆಲುವಿಗಾಗಿ ಸೆಣಸಾಡಿದವು.ಅಂತಿಮ ಪಂದ್ಯದಲ್ಲಿ ಕುಪ್ಪಂಡ ತಂಡವನ್ನು 8-2 ಗೋಲುಗಳಿಂದ ಮಣಿಸಿ ಚೇಂದಂಡ ತಂಡ ವಿಜಯಮಾಲೆ ಧರಿಸಿತು.

ಜಿಲ್ಲೆಯ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಮೈದಾನಕ್ಕೆ ಆಗಮಿಸಿ ಪಂದ್ಯಾವಳಿಯನ್ನು ಕಣ್ತುಂಬಿಕೊಂಡರು. ಆಟಗಾರರನ್ನು ಪ್ರೋತ್ಸಾಹಿಸುತ್ತಾ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಮೈದಾನಕ್ಕೆ ನಾಮಕರಣ: ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಭಾರತ ದೇಶಕ್ಕೆ ಹಲವಾರು ಕ್ರೀಡಾಪಟುಗಳನ್ನು ನೀಡುವಲ್ಲಿ ಕೌಟುಂಬಿಕ ಹಾಕಿ ಸಹಾಯಕವಾಗಿದೆ. ಹಾಕಿ ಅಕಾಡೆಮಿಯ ಮನವಿಯಂತೆ ಪೊನ್ನಂಪೇಟೆ ಟರ್ಫ್ ಮೈದಾನಕ್ಕೆ ದಿ.ಪಾಂಡಂಡ ಕುಟ್ಟಪ್ಪ ಅವರ ಹೆಸರನ್ನು ನಾಮಕರಣ ಮಾಡಲು ರಾಜ್ಯದ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರ ಗಮನಕ್ಕೆ ತರುವ ಮೂಲಕ ಆದಷ್ಟು ಬೇಗನೆ ಇವರ ಹೆಸರು ನಾಮಕರಣ ಮಾಡಲು ಕ್ರಮ ವಹಿಸುವುದಾಗಿ ಹೇಳಿದರು.

ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ, ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ ಬಿ.ಪಳಂಗಪ್ಪ, ಕಾಫಿ ಬೆಳೆಗಾರ ಬಯವಂಡ ಮಹಾಬಲ, ಹಾಕಿ ಕೂರ್ಗ್ ಉಪಾಧ್ಯಕ್ಷ ಬಲ್ಯಾಟಂಡ ಪಾರ್ಥ ಚಂಗಪ್ಪ, ಪುಚ್ಚಿಮಾಡ ಹರೀಶ್ ದೇವಯ್ಯ, ಪ್ರಮುಖರಾದ ಪಾಂಡಂಡ ಲೀಲಾ ಕುಟ್ಟಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಹಾಕಿ ಅಕಾಡೆಮಿ ಉಪಾಧ್ಯಕ್ಷರುಗಳಾದ ಕುಕ್ಕೆರ ಜಯ ಚಿಣ್ಣಪ್ಪ, ಮಾದಂಡ ಎಸ್.ಪೂವಯ್ಯ, ಬಡಕಡ ದೀನಾ ಪೂವಯ್ಯ, ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮಾಜಿ ಒಲಂಪಿಯನ್ ಎಂ.ಪಿ.ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಸಂಜೆ ಪಂಚಮ್ ಬೋಪಣ್ಣ ತಂಡದಿಂದ ಕೊಡವ ನೈಟ್ಸ್ ಕಾರ್ಯಕ್ರಮ ಜರುಗಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!