Friday, December 8, 2023

Latest Posts

ಪ್ಯಾನ್ ಇಂಡಿಯಾ ಎಂಬ ಕಮರ್ಷಿಯಲ್ ಶಬ್ದಕ್ಕೆ ಹೊಸ ಅರ್ಥವನ್ನೇ ಕೊಟ್ಟ ರಿಷಬ್ ಶೆಟ್ಟಿ

 

ಹೊಸ ದಿಗಂತ ಡಿಜಿಟಲ್ ವಿಶ್ಲೇಷಣೆ

ಕಾಂತಾರ ಈಗ ಹಿಂದಿಗೂ ಡಬ್ ಆಗಿ ಆ ವಲಯದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತ ಜನಮೆಚ್ಚುಗೆ ಗಳಿಸುತ್ತಿದೆ. ಇವತ್ತು ಎಲ್ಲರೂ ತಮ್ಮ ಚಿತ್ರ ಪ್ಯಾನ್ ಇಂಡಿಯಾ ಅಂದರೆ ಭಾರತದಾದ್ಯಂತ ಮುಟ್ಟಬೇಕು ಎಂಬ ಮಾತುಗಳನ್ನಾಡುವುದು ಸಹಜವಾಗಿದೆ. ಇದು ಗಳಿಕೆಯ ದೃಷ್ಟಿಯಿಂದ ಹೇಳುವ ಮಾತೇ ಆಗಿರುತ್ತದೆ ಹೆಚ್ಚಿನ ಸಂದರ್ಭಗಳಲ್ಲಿ. ತಪ್ಪೇನಲ್ಲ. ಆದರೆ, ಕಾಂತಾರದ ಹಿಂದಿ ಅವತರಣಿಕೆಯನ್ನು ಆ ಭಾಷಿಕರಿಗೆ ಮುಟ್ಟಿಸುವ ಯತ್ನದಲ್ಲಿ ಹಲವು ಸಂದರ್ಶನಗಳನ್ನು ಕೊಡುತ್ತಿರುವ ರಿಷಬ್ ಶೆಟ್ಟಿ ಈ ಹಂತದಲ್ಲಿ ತುಸು ಭಿನ್ನರಾಗಿ ಕಾಣುತ್ತಿದ್ದಾರೆ. ಅದಕ್ಕೆ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿರುವ ಈ ವಿಚಾರಗಳೇ ಕಾರಣ. ಅವುಗಳ ಸಂಗ್ರಹರೂಪ ಇದು…

 

  • ಪ್ಯಾನ್ ಇಂಡಿಯಾ ಚಿತ್ರ ಮಾಡಬೇಕು ಅಂತೇನೂ ನಾವು ಹೊರಟಿದ್ದಲ್ಲ. ಇತರರೂ ಕನ್ನಡದಲ್ಲೇ ನೋಡಲಿ ಎಂದು ನಾವು ಡಬ್ ಅವತರಣಿಕೆ ಪ್ರಾರಂಭದಲ್ಲಿ ಮಾಡಿರಲೂ ಇಲ್ಲ. ಈಗಾಗುತ್ತಿರುವ ತಮಿಳು, ಹಿಂದಿ ಎಲ್ಲ ಅವತರಣಿಕೆಗಳೂ ಜನರ ಒತ್ತಾಯದಿಂದ ಆಗುತ್ತಿರುವಂಥದ್ದು.
  • ಇದಕ್ಕೆಲ್ಲ ಶ್ರೇಯಸ್ಸು ಸಲ್ಲಬೇಕಿರುವುದು ಕನ್ನಡದ ಜನ ಕೊಟ್ಟಿರುವ ಪ್ರೀತಿಗೆ. ಅವರು ಬಾಯ್ಮಾತಿನ ಮೂಲಕವೇ ಚಿತ್ರವನ್ನು ಪ್ರಚುರಪಡಿಸಿದ, ಪ್ರೀತಿಸಿದ ರೀತಿ ಅನನ್ಯ.
  • ಯಾವುದು ಸಂಸ್ಕೃತಿಯೊಂದರಲ್ಲಿ ಬೇರು ಹೊಂದಿರುತ್ತದೋ ಆ ವಿಷಯ ಸಾರ್ವತ್ರಿಕವೂ ಆಗಿರುತ್ತದೆ ಎಂಬ ನಂಬಿಕೆ ನನ್ನದು. ದೈವಾರಾಧನೆ ಕರಾವಳಿಗೆ ಸೀಮಿತವಿದ್ದರೂ ನಂಬಿಕೆಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ರೀತಿ ಪ್ರಚಲಿತದಲ್ಲಿರುತ್ತವೆ. ಭಾವವೊಂದೇ.

ಈ ಮಾತುಗಳ ಮೂಲಕ ರಿಷಬ್ ಭಿನ್ನರಾಗುವುದು ಏಕೆಂದರೆ, ಪ್ಯಾನ್ ಇಂಡಿಯಾ ಮಾಡಬೇಕೆಂಬ ಒಂದೇ ಕಾರಣಕ್ಕೆ ಸ್ಥಳೀಯ ಕತೆ ಕಡೆಗಣಿಸಿ ಇನ್ಯಾವುದೋ ಎಲ್ಲರಿಗೂ ಪರಿಚಿತ ವಿಷಯದ ಮೇಲೆ ಸಿನಿಮಾ ಮಾಡುವುದು ತಮ್ಮ ಉದ್ದೇಶವಲ್ಲ ಅಂತ ಹೇಳಿರುವುದಕ್ಕೆ. ಅಲ್ಲದೇ, ಚಿತ್ರವು ಕರ್ನಾಟಕದಾಚೆಗೆ ಮುಟ್ಟುತ್ತಿರುವ ಬಗ್ಗೆ ರಿಷಬ್ ಮಾತುಗಳಲ್ಲಿ ಖುಷಿ ಇದೆಯೇ ಹೊರತು, ಹೀಗೊಂದು ಪ್ಯಾನ್ ಇಂಡಿಯಾ ಬ್ರಾಂಡ್ ಪಡೆದುಕೊಳ್ಳುವುದಕ್ಕೋಸ್ಕರವೇ ಹೆಣಗಾಡುವ ಆಟದಿಂದ, ನಮ್ಮ ನೆಲದ ಹೊರಗಿನವರಿಂದ ಸರ್ಟಿಫಿಕೇಟ್ ಪಡೆದರಷ್ಟೇ ಶ್ರೇಷ್ಟ ಎಂಬ ಭಾವನೆಯಿಂದ ಅವರು ಹೊರಗಿರುವುದನ್ನು ತೋರಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!