3 ವರ್ಷಗಳಲ್ಲಿ ದ್ವಿಶತಕ ದಾಟಿದ ಆನೆಗಳ ಸಾವು

 

ಜಗದೀಶ ಎಂ. ಗಾಣಿಗೇರ

ಬೆಳಗಾವಿ: ಅರಣ್ಯದಲ್ಲಿರುವ ಆನೆಗಳ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಕಳೆದ 3ವರ್ಷಗಳಲ್ಲಿ ರಾಜ್ಯದಾದ್ಯಂತ 237 ಆನೆಗಳು ಮೃತಪಟ್ಟಿವೆ.

ನಾನಾ ಕಾರಣಗಳಿಂದ 2020-21ರಲ್ಲಿ 74 ಆನೆ ಮೃತಪಟ್ಟಿವೆ. 2021 -22ರಲ್ಲಿ 90 ಆನೆ, 2022-23ರಲ್ಲಿ 73 ಆನೆಗಳು ಬಲಿಯಾಗಿವೆ.

ಅದೇ ರೀತಿ, ಆನೆ ದಾಳಿಯಿಂದ 2020-21ರಲ್ಲಿ 26 ಜನ ಮೃತಪಟ್ಟಿದ್ದು, 195 ಲಕ್ಷ ರೂ. ಪರಿಹಾರ ನೀಡಲಾಗಿದೆ. 2021-22ರಲ್ಲಿ ಮೃತಪಟ್ಟ 28 ಜನರಿಗೆ 232.50 ಲಕ್ಷ ರೂ., 2022-23ರಲ್ಲಿ ಮೃತಪಟ್ಟ 30 ಜನರಿಗೆ 267.50 ಲಕ್ಷ ಪರಿಹಾರ ವಿತರಿಸಲಾಗಿದೆ.

ರಾಜ್ಯದಲ್ಲಿವೆ 6395 ಆನೆಗಳು
2023ನೇ ಸಾಲಿನಲ್ಲಿ ರಾಜ್ಯದ ಅರಣ್ಯ ಪ್ರದೇಶದಲ್ಲಿ ನೇರ ವೀಕ್ಷಣೆಯಿಂದ ನಡೆದ ಆನೆ ಗಣತಿಯ ವರದಿಯಂತೆ ಕರ್ನಾಟಕ ರಾಜ್ಯದಲ್ಲಿ 6395 ಆನೆಗಳಿವೆ ಎಂದು ವರದಿಯಾಗಿದೆ. ಈ ಪೈಕಿ ವಿದ್ಯುತ್ ಸ್ಪರ್ಶ, ಕಾಡಾನೆ ಸೆರೆ ಕಾರ್ಯಾಚರಣೆ, ವಯೋ ಸಹಜ, ಗುಂಡಿಗೆ ಬಿದ್ದಿರುವುದು, ರೈಲಿಗೆ ಡಿಕ್ಕಿಯಾಗಿರುವುದು ಸೇರಿದಂತೆ ನಾನಾ ಕಾರಣಗಳಿಂದ 3 ವರ್ಷದಲ್ಲಿ ಬಲಿಯಾದ ಆನೆಗಳ ಸಂಖ್ಯೆ 237.

ಸಾಕಾನೆ ಅರ್ಜುನನ ಮೃತ್ಯು
ದೇಶ ವಿದೇಶದಿಂದ ಬಂದು ನೋಡುವ ನಾಡಹಬ್ಬ ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತುಕೊಂಡು ಗಾಂಭೀರ್ಯದ ಹೆಜ್ಜೆ ಹಾಕಿದ್ದ ಅರ್ಜುನ ಇತ್ತೀಚೆಗೆ ಮೃತಪಟ್ಟಿದ್ದಾನೆ. ಹಾಸನ ಜಿಲ್ಲೆಯ ಯಸಳೂರು ಕುಂಡಿಗೆ ಅರಣ್ಯ ವಲಯದಲ್ಲಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ಅರ್ಜುನ ಸಾವು ಕಾಣಬೇಕಾಯಿತು. ಈ ಸಾವಿನ ಸುದ್ದಿ ತಿಳಿದು ಜನರು ಕಣ್ಣೀರು ಹಾಕಿದ್ದಾರೆ.

ಆನೆ ಆವಾಸ ಸ್ಥಾನ ಉಳಿಸಲು ಜಾಗೃತಿ
ಆನೆ ಆವಾಸ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಅವುಗಳ ಸಂರಕ್ಷಣೆ ಮತ್ತು ಸಂತತಿ ಉಳಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆನೆಗಳ ಆವಾಸ ಸ್ಥಾನಗಳ ಸಂರಕ್ಷಣೆಗಾಗಿ ಕಳೆದ ಮೂರು ವರ್ಷದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಹುಲಿ ಯೋಜನೆ ಮತ್ತು ಆನೆ ಯೋಜನೆಯಡಿ ಕೇಂದ್ರದಿಂದ 891.5675 ಲಕ್ಷ ರೂ. ನೀಡಿದರೆ, 804.516 ಲಕ್ಷ ರೂ. ರಾಜ್ಯದ ಪಾಲನ್ನು ನೀಡಲಾಗಿದೆ. ಅರಣ್ಯ ಪ್ರದೇಶಕ್ಕೆ ಬರುವ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸೂಕ್ತ ತರಬೇತಿ ಕೂಡ ಸಿಬ್ಬಂದಿಗೆ ನೀಡಲಾಗುತ್ತಿದೆ ಎಂದು ಮಧು ಜಿ.ಮಾದೇಗೌಡ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಲಿಖಿತ ಮೂಲಕ ಉತ್ತರ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!