ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡು ಭಾಗದಲ್ಲಿ ನೈರುತ್ಯ ಮುಂಗಾರು ಮಳೆಯ ರೌದ್ರಾವತಾರ ಮುಂದುವರಿದಿದ್ದು, ಶಿವಮೊಗ್ಗ ಜಿಲ್ಲೆಯ ಜೀವನಾಡಿಗಳಾದ ತುಂಗಾ ಮತ್ತು ಭದ್ರಾ ನದಿಗಳು ಸಂಪೂರ್ಣವಾಗಿ ತುಂಬಿ ಹರಿಯುತ್ತಿವೆ. ತೀರ್ಥಹಳ್ಳಿ, ಶೃಂಗೇರಿ ಹಾಗೂ ಚಿಕ್ಕಮಗಳೂರಿನ ಕಚ್ಚಿ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟವನ್ನು ಮೀರಿದೆ.
ಗಾಜನೂರು ತುಂಗಾ ಜಲಾಶಯ ಭರ್ತಿ:
ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಸಮೀಪದ ಗಾಜನೂರು ತುಂಗಾ ಅಣೆಕಟ್ಟು ಸಂಪೂರ್ಣವಾಗಿ ಭರ್ತಿಯಾಗಿದೆ. ಜಲಾಶಯದ ಎಲ್ಲಾ 22 ಕ್ರೆಸ್ಟ್ ಗೇಟ್‌ಗಳನ್ನು ಮುಕ್ತಗೊಳಿಸಲಾಗಿದ್ದು, ಸುಮಾರು 89,503 ಕ್ಯೂಸೆಕ್‌ನಷ್ಟು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಶಿವಮೊಗ್ಗ ನಗರದ ಮೂಲಕ ಹಾದುಹೋಗುವ ತುಂಗಾ ನದಿಯು ಬೋರ್ಗರೆಯುತ್ತಾ ಹರಿಯುತ್ತಿದೆ.
ಮುಳುಗಡೆಯಾದ ಐತಿಹಾಸಿಕ ಮಂಟಪಗಳು ಮತ್ತು ದೇವಸ್ಥಾನಗಳು:
ನದಿ ನೀರಿನ ಒಳಹರಿವು ಹೆಚ್ಚಾದ ಕಾರಣ ಶಿವಮೊಗ್ಗದ ಕೋಟೆ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಬಳಿ ಇರುವ ಐತಿಹಾಸಿಕ ತುಂಗಾ ನದಿ ತೀರದ ಪ್ರವಾಹ ಸೂಚಕ ಮಂಟಪವು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಮಂಟಪದ ಮೇಲಿಂದ ಮೂರ್ನಾಲ್ಕು ಅಡಿ ನೀರು ಹರಿಯುತ್ತಿದ್ದು, ತೀರ್ಥಹಳ್ಳಿಯ ಪ್ರಸಿದ್ಧ ರಾಮಮಂದಿರ ಮತ್ತು ಕುರು ಹೊಳೆ ತೀರದ ಸ್ನಾನಘಟ್ಟಗಳು ಜಲಾವೃತಗೊಳ್ಳುವ ಹಂತಕ್ಕೆ ತಲುಪಿವೆ.
https://www.instagram.com/reel/Dbi4hb9pHpN/?igsh=dDR3YWx3NTM5ZXZn
ಭದ್ರಾ ಜಲಾಶಯಕ್ಕೂ ಹೆಚ್ಚಿದ ಒಳಹರಿವು:
ಇತ್ತ ಚಿಕ್ಕಮಗಳೂರು ಮತ್ತು ಲಕ್ಕವಳ್ಳಿ ಕಾವಲು ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ ನದಿಯೂ ಸಹ ಮೈದುಂಬಿಕೊಂಡಿದೆ. ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದ ಒಳಹರಿವು ದಾಖಲಾಗುತ್ತಿದ್ದು, ನದಿ ಪಾತ್ರದ ಇಕ್ಕೆಲಗಳ ನಿವಾಸಿಗಳಿಗೆ ತಾಲೂಕು ಆಡಳಿತ ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ. ಕೂಡ್ಲಿಯಲ್ಲಿ ತುಂಗಾ ಮತ್ತು ಭದ್ರಾ ನದಿಗಳು ಸಂಗಮವಾಗುವ ದೃಶ್ಯ ಅತ್ಯಂತ ರೌದ್ರ ರಮಣೀಯವಾಗಿ ಕಂಗೊಳಿಸುತ್ತಿದೆ.
https://www.instagram.com/reel/Dbk03-HBMdl/?igsh=azZ4MTd3MXFxZDBy
ನದಿ ತೀರದ ಜನರಿಗೆ ಹೈ ಅಲರ್ಟ್:
ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ಜಿಲ್ಲಾಡಳಿತವು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದು, ತುರ್ತು ರಕ್ಷಣಾ ತಂಡಗಳನ್ನು (NDRF/SDRF) ನಿಯೋಜಿಸಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ ತೀರಕ್ಕೆ ತೆರಳಿ ಸೆಲ್ಫಿ ತೆಗೆದುಕೊಳ್ಳುವುದು ಅಥವಾ ನೀರಿನ ರಭಸ ವೀಕ್ಷಿಸಲು ಹೋಗಬಾರದು ಎಂದು ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.
ತೀರ್ಥಹಳ್ಳಿಯಲ್ಲಿ ಅತಿ ಹೆಚ್ಚು ಮಳೆ ದಾಖಲು:
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಒಟ್ಟಾರೆಯಾಗಿ 140.66 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿ 272.10 ಮಿ.ಮೀ, ಹೊಸನಗರದಲ್ಲಿ 267.20 ಮಿ.ಮೀ, ಸಾಗರದಲ್ಲಿ 173.90 ಮಿ.ಮೀ, ಸೊರಬದಲ್ಲಿ 138.80 ಮಿ.ಮೀ, ಶಿಕಾರಿಪುರದಲ್ಲಿ 72.20 ಮಿ.ಮೀ, ಶಿವಮೊಗ್ಗದಲ್ಲಿ 40.60 ಮಿ.ಮೀ ಭದ್ರಾವತಿಯಲ್ಲಿ 19.80 ಮಿ.ಮೀ ಮಳೆಯಾಗಿದೆ.
ರೈತರಲ್ಲಿ ಮೂಡಿದ ಹೊಸ ಭರವಸೆ:
ರಾಜ್ಯದಲ್ಲಿ ಮುಂಗಾರು ಮಳೆ ಆರಂಭದಲ್ಲಿ ಕೊಂಚ ವಿಳಂಬವಾಗಿದ್ದರೂ, ಪ್ರಸ್ತುತ ಸುರಿಯುತ್ತಿರುವ ಧೋ ಮಳೆಯು ಅನ್ನದಾತರಲ್ಲಿ ಹರ್ಷ ತಂದಿದೆ. ಭದ್ರಾ, ತುಂಗಾ, ಅಂಜನಾಪುರ ಮತ್ತು ಅಂಬ್ಲಿಗೊಳ ಜಲಾಶಯಗಳ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಗಾರರು, ಮುಂದಿನ 8-10 ದಿನಗಳ ಕಾಲ ಇದೇ ರೀತಿ ಮಳೆ ಮುಂದುವರಿದರೆ ಎಲ್ಲಾ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಲಿವೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.



