July 17, 2026
Friday, July 17, 2026
spot_img

ಕಾಸರಗೋಡಿನಲ್ಲಿ ಭಾರೀ ಶಬ್ದದೊಂದಿಗೆ ಬಿರುಕುಬಿಟ್ಟ ರಸ್ತೆ: ನಿಗೂಢ ಘಟನೆಗೆ ಬೆಚ್ಚಿಬಿದ್ದ ಸ್ಥಳೀಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಭಾರೀ ಮಳೆಯ ನಡುವೆಯೇ ದೊಡ್ಡ ಶಬ್ದದೊಂದಿಗೆ ರಸ್ತೆ ಬಿರುಕು ಬಿಟ್ಟಿರುವ ಘಟನೆ ಕಾಸರಗೋಡು ಜಿಲ್ಲೆಯ ಕುಂಡಂಗುಳಿಯಲ್ಲಿ ಸಂಭವಿಸಿದೆ. ಘಟನೆಯಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.


ಕುಂಡಂಗುಳಿ-ಮೂನಾಂಗಡವ್ ರಸ್ತೆ ಜಂಕ್ಷನ್ ಸಮೀಪದ ಪೊಯಿನಾಚಿ-ಬಂದಡ್ಕ ಅಂತಾರಾಜ್ಯ ಹೆದ್ದಾರಿಯಲ್ಲಿ ಈ ಬಿರುಕು ಕಾಣಿಸಿಕೊಂಡಿದೆ. ಸ್ಥಳೀಯರ ಪ್ರಕಾರ, ಭಾರೀ ಶಬ್ದ ಕೇಳಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಸುಮಾರು 50 ಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಇಬ್ಭಾಗವಾದ ಸ್ಥಿತಿಯಲ್ಲಿ ಕಂಡು ಬಂದಿದೆ.


ರಸ್ತೆಯಲ್ಲಿ ಉಂಟಾಗಿರುವ ಬಿರುಕಿನ ಮೂಲಕ ಮಳೆ ನೀರು ಹರಿಯುತ್ತಿದ್ದು, ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸಿಡಿಲು ಬಡಿದ ಪರಿಣಾಮ ರಸ್ತೆ ಬಿರುಕು ಬಿಟ್ಟಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದರೂ, ಮಿಂಚು ಬಿದ್ದಿರುವುದನ್ನು ಯಾರೂ ಗಮನಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.


ಘಟನೆ ಸಂಭವಿಸಿದ ವೇಳೆ ರಸ್ತೆಯಲ್ಲಿ ಬಸ್ ಅಥವಾ ಇತರ ವಾಹನಗಳು ಸಂಚರಿಸುತ್ತಿದ್ದರೆ ದೊಡ್ಡ ಪ್ರಮಾಣದ ಅವಘಡ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.


ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿ ಬಿರುಕು ಉಂಟಾಗಿರುವ ಕಾರಣವನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಸುರಕ್ಷತಾ ದೃಷ್ಟಿಯಿಂದ ವಾಹನ ಸಂಚಾರದ ಮೇಲೆ ನಿಗಾ ವಹಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !