ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛಗೊಳಿಸೋಕೆ ರೋಬಾಟಿಕ್‌ ತಂತ್ರ- ಶಾರ್ಕ್‌ ಟ್ಯಾಂಕಿನಲ್ಲಿ ಮನ್ನಣೆ ಪಡೀತು ಈ ಸ್ಟಾರ್ಟಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೆಪ್ಟಿಕ್‌ ಟ್ಯಾಂಕ್‌ ಅಂದ್ರೆ ಸಾಕು ಎಲ್ಲರೂ ಮೂಗು ಮುರಿಯುತ್ತೇವೆ. ಇನ್ನು ಅದನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ಕರ್ಮಿಗಳ ಜೀವನವಂತೂ ಅತ್ಯಂತ ಕಷ್ಟದ್ದು. ಜಗತ್ತು ತಂತ್ರಜ್ಞಾನದ ವಿಷಯದಲ್ಲಿ ಇಷ್ಟೆಲ್ಲ ಮುಂದುವರೆದಿದ್ದರೂ ಇಂದಿಗೂ ಮಾನವರಿಂದಲೇ ಸೆಪ್ಟಿಕ್‌ ಟ್ಯಾಂಕ್‌ ಗಳನ್ನು ಸ್ವಚ್ಛಗೊಳಿಸುವುದು ಮುಂದುವರೆದಿದೆ. ಮಾನವ ತ್ಯಾಜ್ಯವನ್ನು ಕೈಗಳಿಂದ ಸ್ವಚ್ಛಗೊಳಿಸುವುದು ಸ್ವಚ್ಛತಾಕರ್ಮಿಗಳ ಆರೋಗ್ಯದ ದೃಷ್ಟಿಯಿಂದಲೂ ಭೀಕರ ಪರಿಣಾಮ ಬೀರುವಂಥದ್ದು. ಆದರೆ ಚೆನ್ನೈ ಮೂಲದ ನವೋದ್ದಿಮೆಯೊಂದು ಇದಕ್ಕೆ ಪರಿಹಾರ ಕಂಡು ಹಿಡಿದಿದೆ. ರೋಬಾಟಿಕ್‌ ತಂತ್ರಜ್ಞಾನವನ್ನು ಬಳಸಿ ಸೆಪ್ಟಿಕ್‌ ಟ್ಯಾಂಕನ್ನು ಸ್ವಚ್ಛಗೊಳಿಸಬಲ್ಲ ಆವಿಷ್ಕಾರವನ್ನು ಮಾಡಿ, ನವೋದ್ದಿಮೆಗಳನ್ನು ಪ್ರೋತ್ಸಾಹಿಸುವ ಜನಪ್ರಿಯ ರಿಯಾಲಿಟೋ ಶಾರ್ಕ್‌ ಟ್ಯಾಂಕ್‌ ಮೆಟ್ಟಿಲೇರಿದ ಈ ಕಂಪನಿಗೆ ಶಾರ್ಕ್‌ ಗಳು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

2022 ರ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಪ್ರಸ್ತುತಪಡಿಸಿದ ಮಾಹಿತಿಯ ಪ್ರಕಾರ, 2017-2021 ರ ನಡುವೆ, ಭಾರತದಲ್ಲಿ ಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ ಶುಚಿಗೊಳಿಸುವಿಕೆಯ ಸಂದರ್ಭದಲ್ಲಿ 330 ಜನರು ಜೀವ ಕಳೆದುಕೊಂಡಿದ್ದಾರೆ. ಇದಲ್ಲದೇ ಅನೇಕ ಸ್ವಚ್ಛತಾಕರ್ಮಿಗಳು ಆರೋಗ್ಯ ಸಮಸ್ಯೆಗಳಿಗೂ ಒಳಗಾಗಿದ್ದಾರೆ. ಕೈಯಿಂದ ಸ್ವಚ್ಛಗೊಳಿಸುವಿಕೆಯನ್ನು ತಡೆಯಲು ಸರ್ಕಾರವು ಅನೇಕಮಕ್ರಮಗಳನ್ನು ಕೈಗೊಂಡಿದೆ. ಆದರೂ ಈ ವ್ಯವಸ್ಥೆ ಇಂದಿಗೂ ಮುಂದುವರೆಯುತ್ತಿದೆ. ಪ್ರಸ್ತುತ ಶಾರ್ಕ್‌ ಟ್ಯಾಂಕ್‌ ಇಂಡಿಯಾದಲ್ಲಿ ಅನಾವರಣಗೊಂಡಿರುವ ಈ ತಂತ್ರವು ರೋಬೋಟಿಕ್‌ ತಂತ್ರಜ್ಞಾನವನ್ನು ಬಳಸಿ ಅತ್ಯಂತ ಪರಿಣಾಮಕಾರಿಯಾಗಿ ಸೆಪ್ಟಿಕ್‌ ಟ್ಯಾಂಕನ್ನು ಸ್ವಚ್ಛಗೊಳಿಸಬಲ್ಲುದು.

ಚೆನ್ನೈ ಮೂಲದ ನವೋದ್ದಿಮೆಯಾದ ಸೊಲಿನಾಸ್ ಇಂಟೆಗ್ರಿಟಿ ಎಂಬ ನವೋದ್ದಿಮೆಯು ಈ ವಿಧಾನವನ್ನು ಆವಿಷ್ಕರಿಸಿದೆ. 2018 ರಲ್ಲಿ ಸ್ಥಾಪಿತವಾದ ಈ ನವೋದ್ದಿಮೆಯು ಮಾನವ ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛತಾ ವ್ಯವಸ್ಥೆಯನ್ನು ಕೊನೆಗೊಳಿಸುವ ಗುರಿಯೊಂದಿಗೆ ಮೂರು ವಿಧದ ಉತ್ಪನ್ನಗಳನ್ನು ತಯಾರಿಸುತ್ತದೆ. ಅವುಗಳೆಂದರೆ HomoSEP- ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ರೋಬೋಟ್, ಎಂಡೋಬಾಟ್ – ಪೈಪ್‌ಲೈನ್ ತಪಾಸಣೆ ಮಾಡಬಲ್ಲ ಯಂತ್ರ, iGlobus – ಸೋರಿಕೆ ತಡೆಗಟ್ಟುವ ರೋಬಾಟಿಕ್‌ ಯಂತ್ರ.

ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛತೆಗೆ ಈಗಾಗಲೇ ಸೂಪರ್-ಸಕ್ಕರ್ ಯಂತ್ರಗಳಂತಹ ಪರಿಹಾರಗಳು ಲಭ್ಯವಿದೆ ಎಂಬುದು ಹೌದಾದರೂ ಅವು ಹೆಚ್ಚು ಬೆಲೆಯುಳ್ಳವುಗಳಾಗಿವೆ. ಇವುಗಳ ಬೆಲೆ ಸುಮಾರು 3-4 ಕೋಟಿ ರೂಪಾಯಿಗಳಷ್ಟಿರುತ್ತದೆ. ಆದರೆ ಈ ನವೋದ್ದಿಮೆ ಕಂಡು ಹಿಡಿದಿರುವ ರೋಬಾಟಿಕ್‌ ವ್ಯವಸ್ಥೆ 15-20 ಲಕ್ಷಗಳಲ್ಲಿ ಲಭ್ಯವಿದೆ. ಎಂದು ಸಂಸ್ಥಾಪಕರು ಹೇಳಿದ್ದಾರೆ. ಹೀಗಾಗಿ ಸೆಪ್ಟಿಕ್‌ ಟ್ಯಾಂಕ್‌ ಗಳ ಮಾನವ ಸ್ವಚ್ಛತೆಯನ್ನು ಕೊನೆಗೊಳಿಸುವಲ್ಲಿ ಈ ಆವಿಷ್ಕಾರ ಗಣನೀಯ ಕೊಡುಗೆ ನೀಡಲಿದೆ.

ಸೊಲಿನಾಸ್ ಇಂಟೆಗ್ರಿಟಿ ನವೋದ್ದಿಮೆಯ ಈ ಪ್ರಯತ್ನವನ್ನು ಶಾರ್ಕ್‌ ಗಳು ಶ್ಲಾಘಿಸಿದ್ದು ತೀರ್ಪುಗಾರರಾದ ಲೆನ್ಸ್‌ ಕಾರ್ಟ್‌ ನ ಪೀಯೂಶ್ ಬನ್ಸಲ್‌ ಹಾಗು ಶಾದಿ ಡಾಟ್‌ ಕಾಂ ನ ಅನುಪಮ್‌ ಮಿತ್ತಲ್‌ ಬರೋಬ್ಬರಿ 90 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!