ರೊಬೊಟಿಕ್ ಕಂಪನಿಯೊಂದರ ಶೇ. 54 ಪಾಲು ತನ್ನದಾಗಿಸಿಕೊಂಡಿದೆ ರಿಲಾಯನ್ಸ್- ಏನಿಲ್ಲಿಯ ಆಟ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಯಾವುದೋ ಹೆಜ್ಜೆ ಇಟ್ಟಿದೆ ಅಂತಂದ್ರೆ ಅದು ಕೇವಲ ಅದರ ವಹಿವಾಟಿಗೆ ಸಂಬಂಧಿಸಿದ ಸುದ್ದಿಯಾಗಿರುವುದಿಲ್ಲ ಬದಲಿಗೆ ಭವಿಷ್ಯದ ಸೂಚಿಯೂ ಆಗಿರುತ್ತದೆ.

ಫೈವ್ ಜಿ ತಂತ್ರಜ್ಞಾನ, ನವೀಕೃತ ಇಂಧನ ಮೂಲಗಳು ಇಲ್ಲೆಲ್ಲ ರಿಲಾಯನ್ಸ್ ಮಾಡುತ್ತಿರುವ ಬೃಹತ್ ಹೂಡಿಕೆಗಳು ಒಂದರ್ಥದಲ್ಲಿ ಭವಿಷ್ಯದ ದಿನಗಳು ಹೇಗಿರಲಿವೆ ಎಂಬ ಸೂಚನೆಯನ್ನೂ ಬಿಟ್ಟುಕೊಡುತ್ತಿವೆ.

ಹೀಗಿರುವಾಗ ಎಡ್ವರ್ಬ್ ಎಂಬ ರೊಬೊಟಿಕ್ಸ್ ಗೆ ಸಂಬಂಧಿಸಿದ ಕಂಪನಿಯ ಶೇ. 54ರಷ್ಟು ಪಾಲನ್ನು 134 ಮಿಲಿಯನ್ ಡಾಲರುಗಳನ್ನು ತೆತ್ತು ತನ್ನದಾಗಿಸಿಕೊಂಡಿದೆ ರಿಲಾಯನ್ಸ್.

ಈ ಹೂಡಿಕೆ ನೀಡುತ್ತಿರುವ ಸೂಚನೆಗಳೇನು? ರೊಬೊಟಿಕ್ಸ್ ನಲ್ಲಿ ರಿಲಾಯನ್ಸ್ ಗೆ ಏಕೆ ಆಸಕ್ತಿ?

ಒಂದು– ಜಿಯೊ ಮಾರ್ಟ್ ಹೆಸರಲ್ಲಿ ರಿಲಾಯನ್ಸ್ ಪ್ರಾರಂಭಿಸಿರುವ ಪೂರೈಕೆ ಜಾಲಕ್ಕೆ ಇದು ಪೂರಕ. ಬೃಹತ್ ಪ್ಯಾಕೇಜಿಂಗ್ ಮತ್ತು ಕಿರಾಣಿ ವಸ್ತುಗಳ ದಾಸ್ತಾನು ಮತ್ತು ಸಾಗಣೆಗೆ ಯಾಂತ್ರಿಕತೆಯನ್ನು ಯಾರು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸುತ್ತಾರೋ ಅವರೇ ಗೆಲ್ಲುತ್ತಾರೆ.

ಎರಡು– ರಿಲಾಯನ್ಸ್ ಅದಾಗಲೇ ಭವಿಷ್ಯದ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡಿದೆ. ಅಂದರೆ, 5ಜಿ ತಂತ್ರಜ್ಞಾನ ಮತ್ತು ನವೀಕೃತ ಇಂಧನಮೂಲ ಅಭಿವೃದ್ಧಿ ಇತ್ಯಾದಿಗಳಲ್ಲಿ. ಇವೆಲ್ಲ ರೊಬಾಟ್ ಬಳಕೆ ಅಥವಾ ರೊಬಾಟಿಕ್ಸ್ ಜತೆ ಬೆಸೆದುಕೊಂಡಿರುವ ಕ್ಷೇತ್ರಗಳು. ಉದಾಹರಣೆಗೆ 5ಜಿ ತಂತ್ರಜ್ಞಾನ ಎಂಬುದು ವಾಹನವೂ ಸೇರಿದಂತೆ ಹಲವಾರು ‘ಸ್ವಯಂಚಾಲಿತ’ ಅವಕಾಶಗಳನ್ನು ತೆರೆದಿಡುತ್ತದೆ. ಇವೆಲ್ಲವೂ ತಂತ್ರಜ್ಞಾನನಿರ್ದೇಶಿತ ಯಾಂತ್ರಿಕ ಪ್ರಕ್ರಿಯೆಗಳೇ ಆಗಿರುತ್ತವೆ. ಹೀಗಾಗಿ ರೊಬಾಟಿಕ್ಸ್ ಮಹತ್ವ ಹೆಚ್ಚು.

ತೈಲ ಸಂಸ್ಕರಿಸಿಕೊಂಡಿದ್ದ ಕಂಪನಿಯೊಂದು ಬದಲಾಗುತ್ತಿರುವ ಜಗತ್ತು ಮತ್ತದಕ್ಕೆ ಬೇಕಾಗಲಿರುವ ಎಲ್ಲ ತಂತ್ರಜ್ಞಾನಗಳ ಮೇಲೆ ಹೇಗೆ ಯೋಜನಾಬದ್ಧ ನಡೆ ಇಡುತ್ತಿದೆ ಎಂಬ ಕುರಿತ ಬೆರಗೊಂದು ರಿಲಾಯನ್ಸ್ ಬಗ್ಗೆ ನಿಮ್ಮನ್ನು ಕಾಡದೇ ಇರದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!