ಆರಂಭಗೊಳ್ಳದ ಬಿತ್ತನೆ ಕಾರ್ಯ:
ರೈತ ವರ್ಗ ಸದ್ಯ ಭೂಮಿ ಹದಮಾಡಿ, ಬಿತ್ತನೆಗೆ ಸಿದ್ಧತೆಯನ್ನು ಮಾಡಿಕೊಂಡಿದೆ. ಒಂದೆರೆಡು ಮಳೆಯಾದಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆದುಕೊಳ್ಳಲಿದೆ. ಆದರೆ ಜಿಲ್ಲೆಯಲ್ಲಿ ಬಿರು ಬಿಸಿಲಿನ ವಾತಾವರಣ ಮುಂದುವರೆದಿದ್ದು, ಬಿತ್ತನೆಗೆ ಬೇಕಾದಂತಹ ಭೂಮಿ ತೇವಾಂಶಗೊಂಡಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಇನ್ನು ಬಿತ್ತನೆ ಕಾರ್ಯ ಆರಂಭಗೊಂಡಿಲ್ಲ ಎಂದು ರೈತರು ಹೇಳುತ್ತಾರೆ.
7.36 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ:
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 7,36,794 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಈ ಪೈಕಿ ವಿಜಯಪುರ ತಾಲೂಕಿನಲ್ಲಿ 1,65,330 ಹೆಕ್ಟೇರ್, ಬಸವನಬಾಗೇವಾಡಿ 1,17,417 ಹೆಕ್ಟೇರ್, ಇಂಡಿ 1,64,178 ಹೆಕ್ಟೇರ್, ಮುದ್ದೇಬಿಹಾಳ 1,11,401 ಹೆಕ್ಟೇರ್, ಸಿಂದಗಿ 1,78,468 ಹೆಕ್ಟೇರ್ ಪ್ರದೇಶ ಬಿತ್ತನೆ ಮಾಡಲಾಗುತ್ತದೆ. ಪ್ರಸಕ್ತ ವರ್ಷ ತೊಗರಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ.
ಬೀಜ, ಗೊಬ್ಬರ ದಾಸ್ತಾನು:
ಮುಂಗಾರು ಬಿತ್ತನೆಗೆ ಬೇಕಾದ ಬೀಜ ಹಾಗೂ ಗೊಬ್ಬರಗಳನ್ನು ಈಗಾಗಲೇ ದಾಸ್ತಾನು ಮಾಡಲಾಗಿದ್ದು, ತೊಗರಿ 9,200 ಕ್ವಿಂಟಾಲ್, ಮೆಕ್ಕೆಜೋಳ 905 ಕ್ವಿಂಟಾಲ್, ಹೆಸರು 23 ಕ್ವಿಂಟಾಲ್, ಸಜ್ಜೆ 39 ಕ್ವಿಂಟಾಲ್, ಸೂರ್ಯಕಾಂತಿ 36 ಕ್ವಿಂಟಾಲ್ ದಾಸ್ತಾನು ಹೊಂದಲಾಗಿದೆ.